ಯೆಮೆನ್;ಯಮನ್ ನ ರಾಜಧಾನಿ ಸನಾದಲ್ಲಿ ನೂರಾರು ಮಂದಿ ಶಾಲೆಯಲ್ಲಿ ರಂಝಾನ್ ಪ್ರಯುಕ್ತ ನೀಡುವ ನೆರವು ಪಡೆಯಲು ಜಮಾಯಿಸಿದ್ದರಿಂದ ಕನಿಷ್ಠ 85 ಜನರು ಸಾವನ್ನಪ್ಪಿದ್ದಾರೆ ಎಂದು ಸಾಕ್ಷಿಗಳು ಮತ್ತು ಹೌತಿ ಮಾಧ್ಯಮಗಳು ಗುರುವಾರ ತಿಳಿಸಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಘಟನೆಯಲ್ಲಿ ನೂರಾರು ಮಂದಿ ಗಾಯಗೊಂಡಿದ್ದಾರೆ.
ಜನರು ದೊಡ್ಡ ಸಂಖ್ಯೆಯಲ್ಲಿ ಓಡುತ್ತಿರುವುದನ್ನು ಮತ್ತು ನೆಲದ ಮೇಲೆ ಬಿದ್ದು ಕಾಲ್ತುಳಿತಕ್ಕೊಳಗಾದ ಘಟನೆಯ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ಜನರ ಗುಂಪೊಂದು ಒಟ್ಟಿಗೆ ಜಮಾಯಿಸುತ್ತಿರುವುದನ್ನು ಕಾಣಬಹುದು, ಕೆಲವರು ಕಿರುಚುತ್ತಾ, ಕೂಗುತ್ತಾ ರಕ್ಷಣೆಗೆ ಕೈ ಚಾಚಿದ್ದಾರೆ. 13 ಜನರ ಸ್ಥಿತಿ ಗಂಭೀರವಾಗಿದೆ ಎಂದು ಇರಾನ್-ಸಂಯೋಜಿತ ಹೌತಿ ಚಳುವಳಿ ನಡೆಸುತ್ತಿರುವ ಅಲ್ ಮಸಿರಾ ಟಿವಿ ಟೆಲಿವಿಷನ್ ಸುದ್ದಿವಾಹಿನಿ ವರದಿ ಮಾಡಿದೆ ಎಂದು ರಾಯಿಟರ್ಸ್ ಉಲ್ಲೇಖಿಸಿದೆ.
ಸ್ಥಳೀಯ ಆಡಳಿತದ ಸಹಾಯವಿಲ್ಲದೆ ಅಲ್ಲಿನ ವ್ಯಾಪಾರಿಗಳು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಎಂದು ಹೌತಿ ಪಡೆಗಳ ನಿಯಂತ್ರಣದಲ್ಲಿರುವ ಆಂತರಿಕ ಸಚಿವಾಲಯ ಹೇಳಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕವಾಗಿ ತುಂಬಾ ಹಿಂದುಳಿದವರು ಆಗಮಿಸಿದ್ದರು.
ಜನರನ್ನು ನಿಯಂತ್ರಿಸಲು ಹೌತಿ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದ್ದು, ವಿದ್ಯುತ್ ತಂತಿ ಸ್ಫೋಟಗೊಂಡಿದೆ. ಈ ಸ್ಫೋಟದಿಂದ ಭಯಭೀತರಾದ ಜನರು ಓಡಲು ಪ್ರಾರಂಭಿಸಿದರು. ಕಾಲ್ತುಳಿತಕ್ಕೆ ಸಿಲುಕಿ 85 ಮಂದಿ ಅಸುನೀಗಿದ್ದಾರೆ.
ಸೂಕ್ತ ವ್ಯವಸ್ಥೆ ಮಾಡದೆ ಜನರನ್ನು ಸೇರಿಸಿದ್ದು, ನಿಯಂತ್ರಣ ಕಳೆದು ಘಟನೆ ನಡೆದಿದೆ ಎನ್ನಲಾಗಿದೆ.ಕಾರ್ಯಕ್ರಮದ ಇಬ್ಬರು ಆಯೋಜಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಯೆಮೆನ್ ಗೃಹ ಸಚಿವಾಲಯ ತಿಳಿಸಿದೆ.