✍️ ದಿವಾಕರ್.ಡಿ.ಮಂಡ್ಯ
ಕರ್ನಾಟಕದಲ್ಲಿ ಆಪರೇಷನ್ ಕಮಲದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ಸದಾಕಾಲ ಒಂದಿಲ್ಲೊಂದು ವಿವಾದವನ್ನು ತನ್ನ ಮೇಲೆ ಎಳೆದುಕೊಳ್ಳುತ್ತದೆಯೋ ಅಥವಾ ಆಡಳಿತ ನಡೆಸಿ ಅನುಭವವಿಲ್ಲದ ಅನನುಭವಿಗಳ ದಂಡು ತುಂಬಿರುವ ಇವರ ಆಡಳಿತದಲ್ಲಿ ವಿವಾದಗಳನ್ನು ಹುಟ್ಟುಹಾಕುತ್ತಿದ್ದರೋ ಎಂಬುದು ಕರ್ನಾಟಕ ರಾಜ್ಯದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರಿಗೆ ಅನುಮಾನ ಮೂಡುತ್ತಿದೆ. ಏಕೆಂದರೆ ಕರ್ನಾಟಕ ರಾಜ್ಯದಲ್ಲಿ ಆಡಳಿತರೂಢ ಪಕ್ಷವಾಗಿ ಅಧಿಕಾರಕ್ಕೆ ಬಂದು ಆಡಳಿತ ನಡೆಸುತ್ತಿರುವ ದಿನದಿಂದ ಇವರು ಮಾಡಿದ ಅವಾಂತರಗಳು ಒಂದೆರಡಲ್ಲ. ಶಾಲಾಪಠ್ಯಪುಸ್ತಕ, ಹಿಜಾಬ್ ನಿಷೇದ, ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವುದು, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪೋಷಕರಿಂದ ಪ್ರತಿ ತಿಂಗಳು ನೂರು ರೂಪಾಯಿಗಳ ವಂತಿಗೆಯ ಆದೇಶ ಹೀಗೆ ಹಲವು ವಿವಾದಗಳ ಜೊತೆಗೆ ಇಂದು ಅಂತರಾಷ್ಟ್ರೀಯ ಮಹಿಳಾ ದಿನದಲ್ಲೂ ಸಹ ತಮ್ಮ ಮೇಲೆ ವಿವಾದವನ್ನು ಎಳೆದುಕೊಂಡಿದ್ದಾರೆ.ಆ ವಿವಾದಕ್ಕೂ ಮೊದಲು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೋಟವನ್ನು ತಿಳಿಯಬೇಕಾದದ್ದು ಅತ್ಯಂತ ಅವಶ್ಯಕವಾಗಿದೆ.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಥವಾ ವಿಶ್ವ ಮಹಿಳೆಯರ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ವಿಶ್ವದೆಲ್ಲೆಡೆ ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ಪ್ರಚಾರಪಡಿಸಿ ಅವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಶೇಷವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ವಿಶ್ವಸಂಸ್ಥೆಯ ಪ್ರಕಾರ, 2023 ಅಂಕಿ ಅಂಶಗಳ ಪ್ರಕಾರ ಬಡತನದ ಪರಿಸ್ಥಿತಿಯಲ್ಲಿ ವಾಸಿಸುವ 1.3 ಶತಕೋಟಿ ಜನರಲ್ಲಿ ಶೇಕಡಾ 70ಮಹಿಳೆಯರೇ ಇದ್ದು ಅದರಲ್ಲಿ ಶೇಕಡಾ 40 ಬಡ ಕುಟುಂಬಗಳು ಮಹಿಳೆಯರ ನೇತೃತ್ವವನ್ನು ಹೊಂದಿವೆ. ಜಾಗತಿಕ ಆಹಾರ ಉತ್ಪಾದನೆಯಲ್ಲಿ ಮಹಿಳೆಯರು ಶೇಕಡಾ 50 ರಿಂದ ಶೇಕಡಾ 80 ರಷ್ಟಿದ್ದಾರೆ, ಅದರಂತೆಯೇ ವಿಶ್ವದ ಭೂಮಿಯ ಹಂಚಿಕೆಯಲ್ಲಿ
ಶೇಕಡಾ 10 ಕ್ಕಿಂತ ಕಡಿಮೆಯಾದಂತಹ ವಾರಸುದಾರಿಕೆಯ ಪಾಲನ್ನು ಹೊಂದಿದ್ದಾರೆ.
ಅಂತರಾಷ್ಟ್ರೀಯ ಮಹಿಳಾ ದಿನವು ರಾಷ್ಟ್ರೀಯ, ಜನಾಂಗೀಯ, ಭಾಷಿಕ, ಸಾಂಸ್ಕೃತಿಕ, ಆರ್ಥಿಕ ಅಥವಾ ರಾಜಕೀಯ ಹಾಗು ಇತ್ಯಾದಿ ಅಂಶಗಳಲ್ಲಿ ಮಹಿಳೆಯರನ್ನು ಸಮಾನರಾಗಿ ಪರಿಗಣಿಸಿ ಮಹಿಳೆಯರ ಸಾಧನೆಗಳಿಗಾಗಿ ಗುರುತಿಸಲ್ಪಡುವ ದಿನವಾಗಿದೆ . ಇದು ಹಿಂದಿನ ಹೋರಾಟಗಳು ಮತ್ತು ಸಾಧನೆಗಳನ್ನು ಹಿಂತಿರುಗಿ ನೋಡುವ ಸಂದರ್ಭವಾಗಿದೆ, ಮತ್ತು ಹೆಚ್ಚು ಮುಖ್ಯವಾಗಿ, ಭವಿಷ್ಯದ ಪೀಳಿಗೆಯ ಮಹಿಳೆಯರಿಗಾಗಿ ನಿರೀಕ್ಷೆಯ ಸಾಮರ್ಥ್ಯ ಮತ್ತು ಅವಕಾಶಗಳನ್ನು ಅಧಿಕವಾಗಿಸುವ ಉದ್ದೇಶದಿಂದ ಇಂದು ಹಿಂದಿರುಗಿ ನೋಡಬೇಕಾದ ಅವಶ್ಯಕತೆ ಇದೆ.
ಅಂತರಾಷ್ಟ್ರೀಯ ಮಹಿಳಾ ದಿನವು ಒಂದು ಶತಮಾನದ ಹಿನ್ನಲೆಯನ್ನು ಹೊಂದಿದೆ. ಅಂತರಾಷ್ಟ್ರೀಯ ಮಹಿಳಾ ದಿನದ ಕಲ್ಪನೆಯು 20 ನೇ ಶತಮಾನದ ಆರಂಭದಲ್ಲಿ ಉತ್ತರ ಅಮೆರಿಕಾ ಮತ್ತು ಯುರೋಪಿನಾದ್ಯಂತ ಕಾರ್ಮಿಕ ಚಳುವಳಿಗಳ ಚಟುವಟಿಕೆಗಳಿಂದ ಹೊರಹೊಮ್ಮಿತ್ತು. ತದನಂತರ ಅಮೇರಿಕಾದಲ್ಲಿ ಪ್ರಪ್ರಥಮ ರಾಷ್ಟ್ರೀಯ ಮಹಿಳಾ ದಿನವನ್ನು 1909 ರ ಪೆಬ್ರವರಿ 28 ರಂದು ಆಚರಿಸಲಾಯಿತು. ಈ ಚಳುವಳಿಗೆ ಪೂರಕವಾಗಿ 1908ರಲ್ಲೇ ನ್ಯೂಯಾರ್ಕ್‌ನ ಗಾರ್ಮೆಂಟ್ ಅಂಗಡಿಯೊಂದರಲ್ಲಿ ಮಹಿಳಾ ನೌಕರರೇ ತಮ್ಮ ಪರಿಸ್ಥಿತಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ನಂತರ 1910ರಲ್ಲಿ ಸಮಾಜವಾದಿಗಳ ಅಂತರರಾಷ್ಟ್ರೀಯ ಸಭೆಯನ್ನು ಕೋಪನ್‌ಹೇಗನ್‌ನಲ್ಲಿ ನಡೆಸಲು ಆದೇಶಿಸಿ ಬಾಲಕಿಯರು ಮತ್ತು ಮಹಿಳೆಯರ ಹಕ್ಕುಗಳ ಚಳುವಳಿಯನ್ನು ಗೌರವಿಸಲು ಮತ್ತು ಬಾಲಕಿಯರು ಹಾಗು ಮಹಿಳೆಯರಿಗೆ ಸಾರ್ವತ್ರಿಕ ಮತದಾನದ ಹಕ್ಕಿಗೆ ಬೆಂಬಲ ನೀಡಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ದಿನವನ್ನು ಆಚರಿಸಲು ನಿರ್ಣಯಿಸಿ ಒಟ್ಟು ಹದಿನೇಳು ದೇಶಗಳ ನೂರಕ್ಕೂ ಹೆಚ್ಚು ಬಾಲಕಿಯರು ಹಾಗು ಮಹಿಳಾ ಸಮುದಾಯದೊಂದಿಗೆ ಮಹಿಳಾ ದಿನದ ಪ್ರಸ್ತಾವನೆಯನ್ನು
ಅನುಮೋದಿಸಲಾಯಿತು. ನಂತರ 1911 ರಲ್ಲಿ ಕೂಪನ್ ಹೇಗನ್ ಅನುಕ್ರಮದಿಂದಾಗಿ ಮಾರ್ಚ್ 19
ರಂದು ರಿಪಬ್ಲಿಕ್ ಆಫ್ ಆಸ್ಟ್ರಿಯಾ , ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ ಪ್ರಪ್ರಥಮ ಭಾರಿಗೆ ಮೊದಲ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಣೆ ಮಾಡುವಂತೆ ನಿರ್ಧರಿಸಲಾಯಿತು. ಈ ಸಮಯದಲ್ಲಿ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು ಪುರುಷರು ರ್‍ಯಾಲಿಯಲ್ಲಿ ಭಾಗವಹಿಸಿದ್ದು, ಮಹಿಳೆಯರಿಗೆ ಕೆಲಸ ಮಾಡುವ ಹಕ್ಕು, ಶಿಕ್ಷಣ ಮತ್ತು ಉದ್ಯೋಗದಲ್ಲಿನ ತಾರತಮ್ಯವನ್ನು ಕೊನೆಗೊಳಿಸಲು ಒತ್ತಾಯಿಸಿದರು.
ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ 1917ರಲ್ಲಿ ಫೆಬ್ರವರಿಯ ಕೊನೆಯ ಭಾನುವಾರದಂದು ಅಂದರೆ ಎಂಟನೇ ಮಾರ್ಚ್‌ನಲ್ಲಿ ರಷ್ಯಾದ ಮಹಿಳೆಯರು “ಬ್ರೆಡ್ ಮತ್ತು ಪೀಸ್” ಗಾಗಿ ಪ್ರತಿಭಟಿಸಿದಾಗ ಸರ್ಕಾರವು ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿತು.ಹೀಗೆ ಅಂತರಾಷ್ಟ್ರೀಯವಾಗಿ ಸ್ಪೂರ್ತಿಪಡೆದ ಈ ದಿನವನ್ನು ವಿಶ್ವಸಂಸ್ಥೆಯು
1975 ರಿಂದ ಮಾರ್ಚ್ ಎಂಟನೇ ದಿನಾಂಕವನ್ನು ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಣೆ ಮಾಡುವಂತೆ ಘೋಷಣೆ ಮಾಡಿತು.
ಇಷ್ಟೆಲ್ಲಾ ಇತಿಹಾಸವನ್ನು ಹೊಂದಿರುವ ಹಾಗು ತಾರತಮ್ಯದ ವಿರುದ್ದ ಕಳೆದ ಒಂದು ಶತಮಾನದಿಂದಲೇ ಹೋರಾಟ ರೂಪಿಸಿದ ಮಹಿಳೆಯರಿಗೆ ಇಂದು ಕರ್ನಾಟಕ ಸರ್ಕಾರವು ಅಂತರಾಷ್ಟ್ರೀಯ ಮಹಿಳಾ ಆಚರಣೆಯಲ್ಲಿಯೇ ಅದೇ ಹಳೆ ಕಾಲದ ತಾರತಮ್ಯವನ್ನು ಮಾಡುವಂತಹ ಯೋಜನೆಗೆ ಚಾಲನೆ ನೀಡಿದೆ.ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಒಂದು ದಿನದ ಬಸ್ ಪ್ರಯಾಣವನ್ನು ಉಚಿತವೆಂದು ಆದೇಶಿಲಾಗಿದೆ.
ಮಹಿಳೆಯರು ಯಾವ ತಾರತಮ್ಯತೆಯ ವಿರುದ್ದ ಹೋರಾಟ ಮಾಡಿದ್ದರೋ ಅದೇ ತಾರತಮ್ಯವನ್ನು ಒಂದು ಶತಮಾನ ಕಳೆದರೂ ಘನತೆವೆತ್ತ ಕರ್ನಾಟಕ ಸರ್ಕಾರವು ಅನುಸರಿಸುತ್ತಿರುವುದು ಇಡೀ ಮಹಿಳಾ ಸಮುದಾಯಕ್ಕೆ ಹಾಗು ವಿಶ್ವಸಂಸ್ಥೆಯ ನೀತಿಗೆ ಮಾಡಿದ ಘನಘೋರ ಮೋಸ ಎಂದರೇ ತಪ್ಪಾಗಲಾರದು ಅಲ್ಲವೇ…
ಜನಗಳ ಕಿವಿಗೆ ಚನ್ನಾಗಿ ಹೂವು ಇಡುವುದರಲ್ಲಿ ಕಮಲದ ಹೂವಿನ ಚಿಹ್ನೆಯಿಂದ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ.
ಅಂತರಾಷ್ಟ್ರೀಯ ಮಹಿಳೆ ದಿನಾಚರಣೆಯ ಪ್ರಯುಕ್ತ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಓಡಾಡುವ ಮಹಿಳೆಯರಿಗೆ ಒಂದು ದಿನ ಉಚಿತವಾಗಿ ಪ್ರಯಾಣಿಸುವ ಅವಕಾಶ ನೀಡುವುದರಿಂದ ದೊರೆಯಬಹುದಾದ ಪ್ರಯೋಜನವೇನಾದರೂ ಇದೆಯೇ? ಬೆಂಗಳೂರಿನಲ್ಲಿರುವ ಮಹಿಳೆಯರಿಗೆ ಮಾತ್ರ ಈ ಉಚಿತ ಕೊಡುಗೆ ನೀಡಿದರೆ ರಾಜ್ಯದ ಬೇರೆ ಬೇರೆ ಭಾಗದಲ್ಲಿರುವವರು ಮಹಿಳೆಯರಿಗೆ ರಾಜ್ಯ ಸರ್ಕಾರ ಯಾವ ರೀತಿಯ ಕೊಡುಗೆಯನ್ನು ಈ ಮಹಿಳಾ ದಿನಾಚರಣೆಯ ಪ್ರಯುಕ್ತ ನೀಡುತ್ತಿದೆ. ಅಥವಾ ಇತರ ಭಾಗಗಳಲ್ಲಿರುವ ಮಹಿಳೆಯರನ್ನು ಮಹಿಳೆಯರು ಎಂದು ಪರಿಗಣಿಸಿದ್ದಾರೋ ಇಲ್ಲವೋ? ಈ ರೀತಿಯಲ್ಲಿ ನಗರ ಹಾಗು ಗ್ರಾಮೀಣ ಪ್ರದೇಶಗಳ ಮಹಿಳೆಯರ ನಡುವೆ ಅಂತರ ಅಥವಾ ತಾರತಮ್ಯ
ಸೃಷ್ಟಿಸಿ ಅವರನ್ನು ಅವಮಾನಿಸುವುದು ಸರಿಯಲ್ಲ ಅಲ್ಲವೇ?
ಇತರ ಜಿಲ್ಲೆಗಳಲ್ಲಿ ಹಾಗು ರಾಜ್ಯದಾದ್ಯಂತ ಚಲಿಸುವ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳು ಕೂಡ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಂತೆ ಒಂದೇ ಸಂಸ್ಥೆಯ ಆಡಳಿತದಲ್ಲಿರುವ ಸಂಸ್ಥೆಯೇ ಅಲ್ಲವೇ. ಆಗಾದರೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಈ ಉಚಿತ ಪ್ರಯಾಣದ ಅವಕಾಶವನ್ನು ನೀಡಬಹುದಾದರೆ ರಾಜ್ಯದಾದ್ಯಂತ ಹಾಗು ಇತರ ಜಿಲ್ಲೆಗಳಲ್ಲಿ ಏಕೆ ನೀಡಲು ಸಾಧ್ಯವಿಲ್ಲ ಎಂಬ ಅನುಮಾನ ಮೂಡುತ್ತಿದೆ.
BMTC ಯಂತೆ KSTRC ಯಲ್ಲೂ ಕೂಡ ರಾಜ್ಯದಾದ್ಯಂತ ಪ್ರಯಾಣಿಸುವ ಮಹಿಳೆಯರಿಗೆ ಉಚಿತ ಕೊಡುಗೆ ನೀಡಿದ್ದರೆ ಒಪ್ಪಬಹುದಿತ್ತೇನೋ…ಅಂದರೆ ಬೆಂಗಳೂರಿಗೆ ಮಾತ್ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯು ಸೀಮಿತವಾಗಿದೆಯೆ? ಅಥವಾ ಇತರ ಭಾಗದವರಿಗೆ ಉಚಿತ ಕೊಡುಗೆ ನೀಡಿದರೆ ಪ್ರಯೋಜನವಿಲ್ಲ ಅಥವಾ Vote Bank ರಾಜಕಾರಣ ಮಾಡುಲು ಸಾದ್ಯವಿಲ್ಲವೆಂದರ್ಥವೇ?
ಇದಕ್ಕೆ ಹೌದು ಎಂದೇ ಹೇಳಬಹುದು..
ಬೆಂಗಳೂರು ಇಂದು ಅಂತರಾಷ್ಟ್ರೀಯ ಹಾಗು ರಾಷ್ಟ್ರ ಮಟ್ಟದಲ್ಲಿ ಹೆಸರನ್ನು ಗಳಿಸಿದೆ. ಇಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ದೇಶ ಮತ್ತು ವಿದೇಶದಲ್ಲಿ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಜೊತೆಗೆ ಬೆಂಗಳೂರು ನಗರದಲ್ಲಿ 28 ಹಾಗು ಬೆಂಗಳೂರು ಗ್ರಾಮೀಣದಲ್ಲಿ 4 ವಿಧಾನಸಭಾ ಕ್ಷೇತ್ರಗಳನ್ನು ಅಂದರೆ ಒಟ್ಟು 32 ಕ್ಷೇತ್ರಗಳನ್ನು ಹೊಂದಿರುವ ಬೃಹತ್ ಬೆಂಗಳೂರು 2011 ರ ಜನಗಣತಿಯ ಪ್ರಕಾರ 96.21 ಲಕ್ಷ ಒಟ್ಟು ಜನಸಂಖ್ಯೆಯಲ್ಲಿ 45.98 ಲಕ್ಷ ಮಹಿಳೆಯರಿದ್ದರೆ, ಇಂದು 2023 ರ
ಆರ್ಥಿಕ ಹಾಗೂ ಅಂಕಿಸಂಖ್ಯೆ ಇಲಾಖೆಯ ನಿರ್ದೇಶನಾಲಯದ ಅಂದಾಜಿನ ಪ್ರಕಾರ 109.6 ಲಕ್ಷ ಒಟ್ಟು ಜನಸಂಖ್ಯೆಯಿದ್ದು ಇದರಲ್ಲಿ 52.39 ಲಕ್ಷ ಮಹಿಳೆಯರು ಇದ್ದಾರೆ. ಆದರಿಂದ ಇಷ್ಟೊಂದು ಬೃಹತ್ತಾದ ವಿಧಾನಸಭಾ ಕ್ಷೇತ್ರ ಹಾಗು ಬೃಹತ್ ಮಹಿಳಾ ಜನಸಂಖ್ಯೆಯನ್ನು ಹೊಂದಿರುವುದರಿಂದ ಮಹಿಳೆಯರಿಗೆ ವಿಶೇಷವಾದ ಪ್ರಾತಿನಿದ್ಯದ ಉಚಿತ ಕೊಡುಗೆ ನೀಡು ಅವರ ಗಮನ ಹಾಗು ಮತವನ್ನು Vote Bank ರಾಜಕಾರಣದ ಮೂಲಕ ತನ್ನ
ಕಡೆ ಎಳೆದುಕೊಳ್ಳಲು ಮಾಡುತ್ತಿರುವ ಕುತಂತ್ರ ಬುದ್ದಿಯ ಫಲವಿದುವೇ ಅಷ್ಟೇ. ಇತರ ಜಿಲ್ಲೆಗಳು ವಿಧಾನಸಭಾ ಕ್ಷೇತ್ರಗಳನ್ನು ಹಾಗು ಜನಸಂಖ್ಯೆಯನ್ನು
ಹೋಲಿಕೆ ಮಾಡಿದರೆ ಬೆಂಗಳೂರು ಅಧಿಕವಾಗಿರುವುದರಿಂದ ಹೆಚ್ಚಿನ ಗಮನ ಸೆಳೆಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವುದ ಹೊರಗಣ್ಣಿಗೆ ಕಾಣಿಸುತ್ತಿದೆ.
ಕೇವಲ ಬೆಂಗಳೂರು ವ್ಯಾಪ್ತಿಯಲ್ಲಿ ಓಡಾಡುವ ಮಹಿಳೆಯರಿಗೆ ಮಾತ್ರ ಉಚಿತ ಪ್ರಯಾಣದ ಅವಕಾಶ ನೀಡಿ ಇತರ ಜಿಲ್ಲೆಗಳ ಮಹಿಳಾ ಸಮುದಾಯವನ್ನು ನಿರ್ಲಕ್ಷ್ಯ ಮಾಡಿರುವುದು ಇಡೀ ಮಹಿಳಾ ಸಮುದಾಯಕ್ಕೆ ಮಾಡಿದ ತಾರತಮ್ಯವೆಂದೇ ಹೇಳಬಹುದು.
ಆದರೆ ಇದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಆಶಯಕ್ಕೆ ಹಾಗು ಚಿಂತನೆಗಳನ್ನು ಗಾಳಿಗೆ ತೂರಿ ಕೇವಲ ರಾಜಕೀಯ ದೃಷ್ಟಿಕೋನದಿಂದ ಆಚರಣೆಗೆ ವಿಶೇಷ ಆತಿಥ್ಯ ನೀಡುವುದಾದರೆ ಮಹಿಳಾ ದಿನಾಚರಣೆಯ ಕಲ್ಪನೆಗೆ ವಿರುದ್ದವಾದ ಮನಸ್ಥಿತಿಯನ್ನು ಹೊಂದಿದ್ದಾರೆ ಎನ್ನಬಹುದು ಅಲ್ಲವೇ..
2023 ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಿಶ್ವಸಂಸ್ಥೆಯು ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ (DigitALL: Innovation and technology for gender equality) ಎಂಬ ಧ್ಯೇಯವನ್ನು ಪ್ರತಿಪಾದಿಸಿದೆ. ಆದರೆ ಕರ್ನಾಟಕದ ರಾಜ್ಯದ ಆಡಳಿತರೂಢ ಪಕ್ಷವು ವಿಶ್ವಸಂಸ್ಥೆಯ ನೀತಿಯನ್ನೇ ದಿಕ್ಕರಿಸಿ ಮಹಿಳೆಯರಲ್ಲೆ ಅಸಮಾನತೆ ಸೃಷ್ಟಿಸಲು ಹೊರಟಿರುವುದು ಅತ್ಯಂತ ಗಂಭೀರವಾದ ವಿಷಯವಾಗಿದೆ.
ಮುಂಬರುವ ವಿಧಾನಸಭಾ
ಚುನಾವಣಾ ಪ್ರಚಾರದ ತೆವಲಿಗಾಗಿ ಈ ರೀತಿಯ ಅಡ್ಡದಾರಿಯ ಸರ್ವಸಮ್ಮತವಲ್ಲದ ನೀತಿಯನ್ನು ಬಿಟ್ಟು ಜನಾನುರಾಗಿಯಾದ ಕಾರ್ಯಕ್ರಮಗಳಿಗೆ ಒತ್ತು ಕೊಡಬೇಕಾದದ್ದು ಆಡಳಿತರೂಢ ಯಾವುದೇ ಪಕ್ಷದ ಕಾರ್ಯಕ್ರಮವಾಗ ಬೇಕೆ ವಿನಃ ನಾಗರಿಕರಲ್ಲೇ ಅಸಮಾನತೆಯನ್ನು ಬೆಳೆಸುವುದು ಕರ್ನಾಟಕ ರಾಜ್ಯದ ಬೆಳೆವಣಿಗೆ ಹಾಗು ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯದಲ್ಲ.
ಮಹಿಳಾ ದಿನಕ್ಕೆ ಉಚಿತ ಪ್ರಯಾಣ ನೀಡಿರುವುದು ಸ್ವಾಗತಾರ್ಹವೇ ಆದರೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಮನ್ನಣೆ ನೀಡಿದ್ದರೆ ವಿಶೇಷ ಮಹಿಳಾ ದಿನಾಚರಣೆಯನ್ನು ಆಚರಿಸಬಹುದಿತ್ತು. ಆದರೆ ಆಡಳಿತರೂಢ ಪಕ್ಕಕ್ಕೆ ಮೊದಲೇ ಹೇಳಿದಂತೆ ಆಡಳಿತ ನಡೆಸಿದ ಅನುಭವವಾಗಲಿ , ಕಿವಿ ಹಿಂಡಿ ಬುದ್ದಿ ಹೇಳುವವರಾಗಲಿ ಇಲ್ಲದೆ ಕುಂಟು ಕುದುರೆ ಎಷ್ಟು ದೂರ ಓಡುತ್ತದೆಯೋ ಓಡಲಿ ಎಂಬ ಮನೋಭಾವದಿಂದ ಆಡಳಿತ ನಡೆಸುವುದು ಒಂದು ರಾಷ್ಟ್ರೀಯ ಪಕ್ಷದ ಆಡಳಿತ ವೈಖರಿಯಲ್ಲ ಅಲ್ಲವೇ…