ಗಂಡಾಗಿ ಬದಲಾಗಲು ತೀರ್ಮಾನಿಸಿದ ಮಹಿಳಾ ಪೊಲೀಸ್; ಲಿಂಗ ಬದಲಾವಣೆಗೆ ಅನುಮತಿ ನೀಡಿದ ಇಲಾಖೆ!

ಗಂಡಾಗಿ ಬದಲಾಗಲು ತೀರ್ಮಾನಿಸಿದ ಮಹಿಳಾ ಪೊಲೀಸ್;ಲಿಂಗ ಬದಲಾವಣೆಗೆ ಅನುಮತಿ ನೀಡಿದ ಇಲಾಖೆ!

ಭೋಪಾಲ್:ಮಧ್ಯಪ್ರದೇಶ ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಾನ್‌ಸ್ಟೆಬಲ್‌ಗೆ ಲಿಂಗ ಬದಲಾವಣೆ ಪ್ರಕ್ರಿಯೆಗೆ ಒಳಗಾಗಲು ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ರತ್ಲಾಮ್ ಜಿಲ್ಲೆಯಲ್ಲಿ ನೇಮಕಗೊಂಡಿರುವ ದೀಪಿಕಾ ಕೊಠಾರಿ, ಜಂಡರ್ ಬದಲಾವಣೆಗೆ ಅನುಮತಿ ಪಡೆದ ರಾಜ್ಯದ ಎರಡನೇ ಮಹಿಳಾ ಕಾನ್‌ಸ್ಟೆಬಲ್ ಆಗಿದ್ದಾರೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ರಾಜೇಶ್ ರಾಜೋರಾ ಹೇಳಿದ್ದಾರೆ.

ರಾಜ್ಯ ಗೃಹ ಇಲಾಖೆ, ಸೋಮವಾರ ಹೊರಡಿಸಿದ ಆದೇಶದಲ್ಲಿ, ಕೊಠಾರಿ ಅವರಿಗೆ ವೈದ್ಯಕೀಯ ವರದಿಗಳ ಆಧಾರದ ಮೇಲೆ ಲಿಂಗ ಬದಲಾವಣೆಗೆ ಒಳಗಾಗಲು ಅನುಮತಿಸಲಾಗಿದೆ ಎಂದು ಹೇಳಿದೆ.

ಗೃಹ ಇಲಾಖೆಗೆ ದೀಪಿಕಾ ಅವರು ಕಳೆದ ವರ್ಷ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಪುರಸ್ಕರಿಸಿರುವ ಗೃಹ ಇಲಾಖೆ ಲಿಂಗ ಬದಲಾವಣೆಗೆ ಅಸ್ತು ಎಂದಿದೆ.

ಲಿಂಗ ಗುರುತಿಸುವಿಕೆ ತೊಂದರೆ ಎಂದು ಅರ್ಜಿಯಲ್ಲಿ ದೀಪಿಕಾ ಉಲ್ಲೇಖಿಸಿದ್ದರು. ಇದೀಗ ಆಕೆಯು ಸಲ್ಲಿಸಿದ್ದ ವೈದ್ಯಕೀಯ ವರದಿಗಳ ಆಧಾರದ ಮೇಲೆ ಲಿಂಗ ಬದಲಾವಣೆಗೆ ಅವಕಾಶ ನೀಡಲಾಗಿದೆ.ಡಾ.ರಾಜೀವ್​ ಶರ್ಮಾ ಎಂಬುವರು ಆಪರೇಷನ್​ ಮಾಡಲಿದ್ದಾರೆ.

ಸರ್ಕಾರಿ ನೌಕರರಿಗೆ ಲಿಂಗ ಬದಲಾವಣೆಯನ್ನು ಅನುಮತಿಸಲು ಯಾವುದೇ ಸ್ಪಷ್ಟ ನಿಯಮಗಳಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಲಿಂಗ ಬದಲಾವಣೆಯ ಬಳಿಕ ದೀಪಿಕಾ ಅವರಿಗೆ ಮಹಿಳಾ ನೌಕರರಿಗೆ ಸಿಗುವ ಯಾವುದೇ ಸವಲತ್ತುಗಳು ಸಿಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.ಕಾನೂನು ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮತ್ತು ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪನ್ನು ಪರಿಗಣಿಸಿದ ನಂತರ ಲಿಂಗ ಬದಲಾವಣೆಗೆ ಅನುಮತಿ ನೀಡಲಾಗಿದೆ ಎನ್ನಲಾಗಿದೆ.

ಟಾಪ್ ನ್ಯೂಸ್