ಬೆಂಗಳೂರು;ವರ್ತೂರು ಜಾಮಿಯಾ ಮಸೀದಿ ಬಳಿಯ ವಕ್ಪ್ ನ 10 ಎಕರೆ ಜಮೀನಿಗೆ ಸಂಬಂಧಿಸಿದಂತೆ ಆರೋಪ , ಪ್ರತ್ಯಾರೋಪ ಕೇಳಿ ಬಂದಿದ್ದು, ಈ ಕುರಿತು ತನ್ನ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡಿದ್ದಾರೆಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಎನ್.ಕೆ.ಎಂ. ಶಾಫಿ ಸಅದಿ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಅಡ್ವೊಕೇಟ್ ಎಂ.ಎಚ್.ಹನೀಫ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಎಂ.ಎಚ್ ಹನೀಪ್, 1975ರಿಂದಲೂ ಈ ಜಮೀನಿಗೆ ಸಂಬಂಧಿಸಿದಂತೆ ಭೂ ನ್ಯಾಯಮಂಡಳಿಯಲ್ಲಿ ವ್ಯಾಜ್ಯ ನಡೆಯುತ್ತಿತ್ತು. 2021ರಲ್ಲಿ ಹೈಕೋರ್ಟ್ ಭೂ ನ್ಯಾಯಮಂಡಳಿಯ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
ದಿವಂಗತ ಅಮೀರ್ ಪಾಷ ಅವರ ಕುಟುಂಬದ ಸದಸ್ಯರು ಗ್ರ್ಯಾಂಡ್ ಸ್ಕೈ ಇನ್ಫ್ರಾ ಪ್ರಾಜೆಕ್ಟ್ ಎಂಬ ಸಂಸ್ಥೆಗೆ ಆ 10 ಎಕರೆ ಜಮೀನನ್ನು ಮಾರಾಟ ಮಾಡಿದ್ದಾರೆ. ಇದರ ವಿರುದ್ಧವಾಗಿ ವಕ್ಫ್ ಬೋರ್ಡ್ ಎಸ್.ಆರ್.ಅನುರಾಧಾ ಮೂಲಕ ವಕೀಲರಾದ ಸ್ವಾತಿ ಅಶೋಕ್ ಅವರಿಗೆ ಪ್ರಕರಣ ಮರು ಹಂಚಿಕೆ ಮಾಡಿತ್ತು. ಆ ನಂತರ, ನನಗೆ ಈ ಪ್ರಕರಣದ ಜವಾಬ್ದಾರಿ ವಹಿಸಲಾಯಿತು ಎಂದು ಹನೀಫ್ ಹೇಳಿದರು.
ಇದರಲ್ಲಿ ನಾನು ಭೂಮಿಯನ್ನು ಖರೀದಿಸಿದ ಸಂಸ್ಥೆಯನ್ನು ಪ್ರತಿವಾದಿಯನ್ನಾಗಿ ಮಾಡಿದ್ದೇನೆ.ವಕ್ಫ್ ಭೂಮಿಯನ್ನು ಖರೀದಿ ಮಾಡಿರುವ ಸಂಸ್ಥೆಯ ಜೊತೆಗೆ ನೌಫಲ್ ಎಂಬಾತ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಶಾಫಿ ಸಅದಿ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ವಿಷಯವನ್ನು ಪ್ರತಿಭಟಿಸಿ ನಾನು ವಕ್ಫ್ ಬೋರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರವನ್ನು ಬರೆದಿದ್ದೇನೆ.ಇವರ ಅಕ್ರಮ ಬಯಲಿಗೆ ಬರುವ ಆತಂಕದಿಂದ ಮಾಧ್ಯಮಗಳಲ್ಲಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಇದಲ್ಲದೆ ವಕ್ಪ್ ಆಸ್ತಿ ಕಬಳಿಕೆಗೆ ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ.