ವಿಟ್ಲ; ತಾಯಿಗೆ ಹಲ್ಲೆ ನಡೆಸಿ, ಚೂರಿಯಿಂದ ಇರಿಯಲು ಯತ್ನಿಸಿದ ಮಗ

ವಿಟ್ಲ:ಹೆತ್ತ ತಾಯಿಗೆ ಬೆದರಿಸಿ ಹಲ್ಲೆ ಮಾಡಿ, ಚೂರಿಯಿಂದ ಇರಿಯಲು ಯತ್ನಿಸಿ ಮಗ ಪರಾರಿಯಾದ ಘಟನೆ ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಡ್ಕಿದು ಗ್ರಾಮದ ನಾರಾಯಣ ಅವರ ಮಗ ಸಚಿನ್‌ ಎಂಬಾತನು ಆಸ್ತಿಯಲ್ಲಿ ಪಾಲು ಕೊಡುವಂತೆ ಕೇಳಿ ತಾಯಿಯ ತಲೆ ಕೂದಲು ಹಿಡಿದು ಮುಖಕ್ಕೆ ಕೈಯಿಂದ ಹೊಡೆದು ಬೆದರಿಕೆ ಹಾಕಿದ್ದಾನೆ.

ಹಿರಿಯ ಪುತ್ರ ಚೇತನ್‌ ಕುಮಾರ್ ಸಂಜೆ ವೇಳೆ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಮನೆಯ ಅಡಿಗೆಕೋಣೆಯಿಂದ ಅಮ್ಮ ರೋಹಿಣಿ ಅಳುವ ಶಬ್ದ ಕೇಳಿಬರುತ್ತಿತ್ತು.ತಕ್ಷಣ ಅಡುಗೆ ಕೋಣೆಗೆ ಓಡಿಹೋದಾಗ ಅಲ್ಲಿ ತಾಯಿ ರೋಹಿಣಿ ಮೇಲೆ ಸಚಿನ್ ಹಲ್ಲೆ ಮಾಡುವುದು ಕಂಡು ಬಂದಿತ್ತು.

ತಕ್ಷಣ ಇದನ್ನು ತಡೆಯಲು ಚೇತನ್‌ ಮುಂದಾದಾಗ ಸಚಿನ್ ಅಲ್ಲೇ ಇದ್ದ ಚೂರಿಯಿಂದ ಅಮ್ಮನಿಗೆ ಚುಚ್ಚಲು ಮುಂದಾಗಿದ್ದಾನೆ.ಬಳಿಕ ಚೇತನ್‌ ಚೂರಿಯನ್ನು ಕಸಿಯುತ್ತಿದ್ದಂತೆ ಅಡುಗೆ ಕೋಣೆಯಲ್ಲಿದ್ದ ಕಲ್ಲನ್ನು ತೆಗೆದು ತಾಯಿಯ ತಲೆಯ ಹಿಂಬದಿಗೆ ಹೊಡೆದು ಕೈಗೆ ಕಚ್ಚಿ ಓಡಿಹೋಗಿದ್ದಾನೆ.

ಗಾಯಗೊಂಡ ತಾಯಿ ರೋಹಿಣಿ ಹಾಗೂ ಚೇತನ್‌ರವರನ್ನು ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್