ಕಲಬುರಗಿ:ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮನೆಗೆ ನುಗ್ಗಿದ ಸಂಬಂಧಿಕರು ಹರಿತವಾದ ಆಯುಧದಿಂದ ಮಹಿಳೆಯೊಬ್ಬರಿಗೆ ಇರಿದು ಕೊಲೆ ಮಾಡಿರುವ ಘಟನೆ ರೇವಣಸಿದ್ದೇಶ್ವರ್ ಕಾಲೋನಿಯ ಕೆ.ಕೆ.ನಗರದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಆರೋಪಿಗಳು ಮಹಿಳೆಯ ಜೊತೆಗಿದ್ದ ನಾಲ್ವರನ್ನು ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿದ್ದಾರೆ.
ವಿಜಯಲಕ್ಷ್ಮೀ ಮೃತರು. ಈಕೆಯನ್ನು ರಕ್ಷಿಸಲು ಹೋದ ನಾಲ್ವರು ಮಕ್ಕಳಾದ ಮಹಾದೇವ, ರೇಣುಕಾ, ಪಲ್ಲವಿ, ನಾಗರಾಜ ಗಾಯಗೊಂಡಿದ್ದಾರೆ.
ಘಟನೆಗೆ ಆಸ್ತಿ ವಿವಾದವೇ ಕಾರಣ ಎಂದು ಹೇಳಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಲಕ್ಷ್ಮೀ ಅವರ ಪತಿ ಮಲ್ಕಯ್ಯ ಮಠ ಅವರು ಕೆಲಸಕ್ಕೆ ಹೋಗಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಅವರ ಸಂಬಂಧಿಕರಾದ ರೇವಣಸಿದ್ದಯ್ಯ ಮಠ, ಸಿದ್ರಾಮಯ್ಯ ಮಠ ಮತ್ತು ಮಡೆಪ್ಪ ಸ್ವಾಮಿ ಮಾರಕಾಸ್ತ್ರಗಳೊಂದಿಗೆ ಮನೆಯೊಳಗೆ ನುಗ್ಗಿ ಅವಾಚ್ಯವಾಗಿ ನಿಂದಿಸಿ, ಆಸ್ತಿ ಬೇಡುತ್ತೀರಾ ಎಂದೆಲ್ಲ ಹೆದರಿಸಿದ್ದಾರೆ. ಮಾತಿಗೆ ಮಾತು ಬೆಳೆದು ರೇವಣಸಿದ್ದಯ್ಯ ಸ್ವಾಮಿ ಚಾಕು ತೆಗೆದು ವಿಜಯಲಕ್ಷ್ಮೀ ಅವರ ಹೊಟ್ಟೆ, ತಲೆ ಮತ್ತು ಬಲರಟ್ಟೆಗೆ ಇರಿದು ಕೊಲೆ ಮಾಡಿದ್ದಾನೆ.