ಬೆಂಗಳೂರು; ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ವಿಧಾನಸಭೆ ಪ್ರವೇಶ ಮಾಡಿ ಶಾಸಕರ ಆಸನದಲ್ಲಿ ಕುಳಿತುಕೊಂಡಿದ್ದರು.
ಸುಮಾರು ಹದಿನೈದು ನಿಮಿಷಗಳ ಕಾಲ ಸದನದಲ್ಲಿ ಕುಳಿತುಕೊಂಡಿದ್ದ ಅವರು ಮತ್ತೆ ಸದನದಿಂದ ನಿರ್ಗಮಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ವಕೀಲ ತಿಪ್ಪೇರುದ್ರಪ್ಪ (76) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.ಇವರು ಮೂಲತಃ ಚಿತ್ರದುರ್ಗ ಜಿಲ್ಲೆಯವರು ಎನ್ನಲಾಗಿದೆ.
ಶುಕ್ರವಾರ ಮಧ್ಯಾಹ್ನ 12ಗಂಟೆಗೆ ಕಲಾಪ ಆರಂಭಗೊಂಡಾಗ ಶಾಸಕರಂತೆ ವಕೀಲ ತಿಪ್ಪೇರುದ್ರಪ್ಪ ಆಡಳಿತ ಪಕ್ಷದ ಸದಸ್ಯರ ಆಸನದಲ್ಲಿ 15 ನಿಮಿಷಗಳ ಕಾಲ ಕೂತು ಬಜೆಟ್ ಮಂಡನೆಯನ್ನು ಆಲಿಸಿ ಹೊರಗೆ ಹೋಗಿದ್ದಾರೆ.
ಈ ವೇಳೆ ಕಲಬುರಗಿ ಜಿಲ್ಲೆಯ ಗುರುಮಿಟ್ಕಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಸದಸ್ಯ ಶರಣಗೌಡ ಕಂದಕೂರು ಅವರು, ಅಪರಿಚತ ವ್ಯಕ್ತಿಯನ್ನು ಗಮನಿಸಿ ಸಂಶಯಗೊಂಡು ತಮ್ಮ ಪಕ್ಕದಲ್ಲಿದ್ದ ಶಾಸಕರಿಗೆ ವಿಚಾರಿಸಿ ಬಳಿಕ ಸ್ಪೀಕರ್ ಯು.ಟಿ.ಖಾದರ್ ಅವರ ಗಮನಕ್ಕೆ ತಂದಿದ್ದಾರೆ.