ಬೆಂಗಳೂರು; ಕರ್ನಾಟಕ ವಿಧಾನಸಭೆಯ ನೂತನ ಸ್ಪೀಕರ್ ಆದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಸ್ಪೀಕರ್ ಯುಟಿ ಖಾದರ್ ಆಗಮಿಸಿದ್ದಾರೆ.ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಸೇರಿ ಕ್ಷೇತ್ರದ ಜನರು ಗೌರವದಿಂದ ಸ್ವಾಗತವನ್ನು ಮಾಡಿದ್ದಾರೆ.
ಮಂಗಳೂರಿನಲ್ಲಿ ಕ್ಷೇತ್ರದ ಜನರನ್ನು ಮತ್ತು ಅಭಿಮಾನಿಗಳನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯುಟಿ ಖಾದರ್, ಸ್ಪೀಕರ್ ಆದರೆ ಜನರ ಸಂಪರ್ಕಕ್ಕೆ ಅಡ್ಡಿ ಇಲ್ಲ, ತಾನು ಸ್ಪೀಕರ್ ಆಗಿದ್ದರೂ, ಜನ ಸಾಮಾನ್ಯರಿಗೆ ಮತ್ತು ತಮ್ಮ ಕ್ಷೇತ್ರದ ಜನತೆಗೆ ತಮ್ಮನ್ನು ಸಂಪರ್ಕಿಸಲು ಅಡ್ಡಿಯಾಗುವುದಿಲ್ಲ ಎಂದು ಹೇಳಿದ್ದಾರೆ.
ಬಡವರಿಗೆ, ನಿರ್ಗತಿಕರಿಗೆ ತಮ್ಮನ್ನು ಭೇಟಿಯಾಗಿ ಸಮಸ್ಯೆ ಹೇಳಲು ತಮ್ಮ ಕಚೇರಿಯ ಬಾಗಿಲು ಸದಾ ತೆರೆದಿರುತ್ತದೆ. ಶಿಷ್ಟಾಚಾರ ಯಾವುದೂ ಇಲ್ಲ, ಜನಸಾಮಾನ್ಯರ ಪ್ರೀತಿ, ವಿಶ್ವಾಸವೇ ಶಿಷ್ಟಾಚಾರ ಎಂದು ಹೇಳಿದ್ದಾರೆ.
ನಾನು ಕ್ಷೇತ್ರದ ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಎಚ್ಚರ ವಹಿಸಿ ಕೆಲಸ ಮಾಡುತ್ತೇನೆ.ಜನರ ಒಡನಾಟದೊಂದಿಗೆ ಸ್ಪೀಕರ್ ಸ್ಥಾನದ ಘನತೆ ಗೌರವವನ್ನು ಉಳಿಸಲು ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ.
32 ಇಲಾಖೆಯ ಮಂತ್ರಿಗಳು, ಶಾಸಕರು, ಅಧಿಕಾರಿಗಳು ನನ್ನ ವ್ಯಾಪ್ತಿಗೆ ಬರುತ್ತಾರೆ.ಎಲ್ಲಾ ಇಲಾಖೆಯ ಕೆಲಸ ಸಮರ್ಥವಾಗಿ ಮಾಡುತ್ತೇನೆ.ದೇವರು ಜನ್ಮ ಕೊಡುವಾಗಲೇ ಎಲ್ಲವನ್ನೂ ಅಳೆದು ಕೊಡುತ್ತಾನೆ.ರಾಜಕೀಯದಲ್ಲಿ ಅದು ಸ್ವಲ್ಪ ಜಾಸ್ತಿ.ಯಾವ ಸಂದರ್ಭದಲ್ಲಿ ಏನು ಆಗುತ್ತದೆ ಎನ್ನಲು ಸಾಧ್ಯವಿಲ್ಲ.ಎಲ್ಲವೂ ದೇವರ ಇಚ್ಛೆ ಎಂದು ಹೇಳಿದ್ದಾರೆ.