ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ನಮಾಝ್ ಮಾಡಲು ಅವಕಾಶ ಕೊಟ್ಟ ಆರೋಪ; ಶಿಕ್ಷಕಿ ಅಮಾನತು

ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ನಮಾಝ್ ಮಾಡಲು ಅವಕಾಶ ಕೊಟ್ಟ ಆರೋಪ; ಶಿಕ್ಷಕಿ ಅಮಾನತು

ಉತ್ತರಪ್ರದೇಶ; ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಮಾಝ್‌ ಮಾಡಲು ಅವಕಾಶ ಮಾಡಿಕೊಟ್ಟ ಶಾಲಾ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಿರುವ ಘಟನೆ ಠಾಕೂರ್‌ಗಂಜ್‌ ಪ್ರದೇಶದಲ್ಲಿನ ಶಾಲೆಯಲ್ಲಿ ನಡೆದಿದೆ.

ವರದಿಗಳ ಪ್ರಕಾರ, ಲಕ್ನೋದ ಠಾಕೂರ್‌ಗಂಜ್ ಪ್ರದೇಶದ ನೇಪಿಯರ್ ರಸ್ತೆಯಲ್ಲಿರುವ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮೀರಾ ಯಾದವ್ ಅವರನ್ನು ಉತ್ತರ ಪ್ರದೇಶ ಸರ್ಕಾರಿ ಸೇವಾ ನಿಯಮಗಳು 1999ರಡಿಯಲ್ಲಿ ಅಮಾನತು ಮಾಡಲಾಗಿದೆ.

ಅ.21 ರಂದು ವೀಡಿಯೊ ವ್ಯಾಪಕವಾಗಿ ವೈರಲ್‌ ಆಗಿತ್ತು. ವೈರಲ್‌ ವಿಡಿಯೋದಲ್ಲಿ ಶಾಲೆಯ ವಿದ್ಯಾರ್ಥಿಗಳು ಶಾಲೆಯಲ್ಲಿ ನಮಾಜ್ ಮಾಡುವುದು ಸೆರೆಯಾಗಿತ್ತು. ಇದರ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿ ವಿರುದ್ಧ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದು,ಈ ಕುರಿತು ತನಿಖೆಗೆ ಆದೇಶಿಸಲಾಗಿದೆ.

ಶಿಕ್ಷಣ ಇಲಾಖೆ ಅಧಿಕಾರಿ ಅರುಣ್‌ ಕುಮಾರ್ ಈ ಕುರಿತು ಪ್ರತಿಕ್ರಿಯಿಸಿದ್ದು, ನೇಪಿಯರ್‌ ರಸ್ತೆಯ ಪ್ರಾಥಮಿಕ ಶಾಲೆಯಲ್ಲಿ ಬೋಧನಾ ಕಾರ್ಯ ಹೊರತುಪಡಿಸಿ ಇತರ ಚಟುವಟಿಕೆಗಳಲ್ಲಿ ಕೆಲವು ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂಬ ಮಾಹಿತಿ ಬಂದಿದೆ. ಕೆಲವು ವಿದ್ಯಾರ್ಥಿಗಳು ಶುಕ್ರವಾರ ನಮಾಜ್ ಮಾಡಿದ್ದಾರೆ ಎಂಬುದನ್ನು ಶಿಕ್ಷಕರು ದೃಢಪಡಿಸಿದ್ದಾರೆ. ಇದು ಇಲಾಖೆಯ ನಿರ್ದೇಶನ ಮತ್ತು ಮಾರ್ಗಸೂಚಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಇದಲ್ಲದೆ ಶಿಕ್ಷಕಿಯರಾದ ತೆಹ್ಜೀನ್‌ ಫಾತಿಮಾ, ಮಮತಾ ಮಿಶ್ರಾ ಈ ಕೃತ್ಯಕ್ಕೆ ಸಹಕರಿಸಿದ್ದು, ಈ ಇಬ್ಬರಿಗೂ ಕಠಿಣ ಎಚ್ಚರಿಕೆ ನೀಡಲಾಗಿದೆ. ಫಾತಿಮಾ ಮತ್ತು ಮಿಶ್ರಾ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ಕುಮಾರ್ ಅಧಿಕೃತ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಪ್ರಾಥಮಿಕ ಶಾಲೆಯ ಬಹುಪಾಲು ವಿದ್ಯಾರ್ಥಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರು. ವಿದ್ಯಾರ್ಥಿಗಳು ಶುಕ್ರವಾರ ನಮಾಜ್‌ಗಾಗಿ ಮನೆಗೆ ಎಂದು ಹೋಗುತ್ತಿದ್ದರು. ಆದರೆ ಉಳಿದ ತರಗತಿಗಳಿಗೆ ಬರುತ್ತಿರಲಿಲ್ಲ. ಇದರಿಂದ ಶಿಕ್ಷಕಿ ಯಾದವ್ ಅವರು ಶಾಲೆಯಲ್ಲಿ ನಮಾಝ್ ಮಾಡಲು ಅವಕಾಶ ಮಾಡಿಕೊಟ್ಟಿದ್ದರು ಎಂದು ಹೇಳಲಾಗಿದೆ.

ಟಾಪ್ ನ್ಯೂಸ್