ಮದುವೆಯಾದ ಮೂರನೇ ದಿನಕ್ಕೆ ಪೊದೆಯಲ್ಲಿ ಬೆತ್ತಲಾಗಿ ಸುಟ್ಟ ಗಾಯಗಳೊಂದಿಗೆ ಪತ್ತೆಯಾದ ವಧು; ಶಾಕಿಂಗ್ ಘಟನೆ ವರದಿ
ಉತ್ತರಪ್ರದೇಶ;ಮದುವೆಯಾಗಿ ಮೂರೇ ದಿನಕ್ಕೆ ನವವಧುವಿನ ಮೇಲೆ ಆಯಸಿಡ್ ದಾಳಿ ನಡೆದಿರುವ ಭೀಕರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಆಯಸಿಡ್ ದಾಳಿಗೆ ಒಳಗಾಗಿ ಶೇ 40ರಷ್ಟು ಸುಟ್ಟ ಗಾಯಗಳಿಗೆ ಒಳಗಾದ ಸಂತ್ರಸ್ತೆ ದೆಹಲಿ ಮತ್ತು ಲಖನೌ ಹೆದ್ದಾರಿಯಲ್ಲಿ ಬೆತ್ತಲಾಗಿ ಬಿದ್ದಿದ್ದರು.ಇದನ್ನು ಗಮನಿಸಿದ ಸ್ಥಳೀಯರು ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
25 ವರ್ಷದ ಮಹಿಳೆ ಸ್ಥಿತಿ ಸದ್ಯ ಚಿಂತಾಜನಕವಾಗಿದ್ದು, ಆಕೆಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.
ವರದಿ ಅನುಸಾರ ಮಹಿಳೆ ಏಪ್ರಿಲ್ 22ರಂದು ಮದುವೆಯಾಗಿದ್ದರು.ಅವರು ಮರುದಿನ ತನ್ನ ತವರಿಗೆ ಮರಳಿದ್ದರು ಎನ್ನಲಾಗಿದೆ.ಮಂಗಳವಾರ ಫಂತೆಗಂಜ್ ಪಶ್ಚಿಮ ಪ್ರದೇಶದಲ್ಲಿ ನವ ವಿವಾಹಿತೆ ಪೊದೆಗಳ ಮಧ್ಯೆ ಬೆತ್ತಲಾಗಿ, ಸುಟ್ಟ ಗಾಯಗಳಿಂದ ಕಂಡು ಬಂದಿದ್ದಾರೆ ಎಂದು ವರದಿಯಾಗಿದೆ.
ಗಂಭೀರವಾಗಿದ್ದ ಮಹಿಳೆ ಹೇಗೋ ತನ್ನ ಕುರಿತು ಪೊಲೀಸರಿಗೆ ಮಾಹಿತಿ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಇದರಿಂದಾಗಿ ನವ ವಿವಾಹಿತೆಯ ತಂದೆಯನ್ನು ಪೊಲೀಸರು ಠಾಣೆಗೆ ಕರೆಯಿಸಿ, ಮಗಳ ಬಗ್ಗೆ ವಿಚಾರಿಸಿದ್ದಾರೆ. ಈ ಬಗ್ಗೆ ಕೂಲಂಕಷ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ವೈದ್ಯರಾದ ಡಾ.ಜೆಪಿ ಮೌರ್ಯ ಈ ಕುರಿತು ಮಾತನಾಡಿದ್ದು, ರಾಸಾಯನಿಕ ಸುಟ್ಟ ಗಾಯಗಳಿಗೆ ಒಳಗಾಗಿದ್ದ ನವ ವಿವಾಹಿತೆಯನ್ನು ಪೊಲೀಸರು ಕರೆತಂದಿದ್ದಾರೆ. ದಾಳಿಗೆ ಒಳಗಾಗಿರುವ ಯುವತಿಯ ಮುಖ, ಕುತ್ತಿಗೆ, ತೋಳು, ಎದೆಯೆಲ್ಲಾ ಆಯಸಿಡ್ ದಾಳಿಗೆ ತುತ್ತಾಗಿದೆ. ಆಕೆಯ ಕುತ್ತಿಗೆಯಲ್ಲಿ ಕಲೆಗಳಿದ್ದು, ಮಹಿಳೆಯು ತಮ್ಮ ಜೀವ ಉಳಿಸಿಕೊಳ್ಳಲು ಹೋರಾಟ ಮಾಡಿರುವ ಶಂಕೆ ಆಕೆಯ ಮೇಲಿನ ಗಾಯ ಹಾಗೂ ಅವಳು ಹೇಗೋ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ಬಂದಿರುವುದರಿಂದ ಗೊತ್ತಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.
ತೀವ್ರ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯನ್ನು ಸ್ತ್ರೀ ರೋಗ ತಜ್ಞರು, ಇಎನ್ಟಿ ಮತ್ತು ಸುಟ್ಟ ಗಾಯ ತಜ್ಞರು ಪರೀಕ್ಷೆಗೆ ಒಳಪಡಿಸಿದ್ದಾರೆ. ಆಕೆಯನ್ನು ಹೆಚ್ಚಿನ ಚಿಕಿತ್ಸೆಗೆ ಲಕ್ನೋ ಮೆಡಿಕಲ್ ಸೆಂಟರ್ಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.ಈ ಕುರಿತು ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.