ಉತ್ತರಪ್ರದೇಶ; ನೋಂದಾವಣೆಯಾಗದ ಮದರಸಾಗಳಿಗೆ ದಿನಕ್ಕೆ 10,000ರೂ ದಂಡ!

ಉತ್ತರಪ್ರದೇಶ: ನೋಂದಣಿ ಮಾಡದೆ ಕಾರ್ಯಾಚರಣೆ ಮಾಡುತ್ತಿರುವ ಮದರಸಾಗಳ ವಿರುದ್ಧ ಉತ್ತರಪ್ರದೇಶ ಸರ್ಕಾರ ತನಿಖೆಗೆ ಆದೇಶ ಹೊರಡಿಸಿದೆ.

ಉತ್ತರ ಪ್ರದೇಶದ ಮುಜಾಫರ್​ನಗರ ಜಿಲ್ಲೆಯಲ್ಲಿರುವ ಮದರಸಾಗಳು ತನಿಖಾ ವ್ಯಾಪ್ತಿಯಲ್ಲಿವೆ. ಈ ಜಿಲ್ಲೆಯಲ್ಲಿ ಕೆಲ ಮದರಸಾಗಳು ಸರ್ಕಾರದ ಅನುಮತಿಯಿಲ್ಲದೆ ಕಾರ್ಯಾಚರಣೆ ಮಾಡುತ್ತಿವೆ. ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಮದರಸಾಗಳ ಮ್ಯಾನೇಜರ್​ಗಳಿಗೆ ನೋಟಿಸ್​ ಹೊರಡಿಸಲಾಗಿದೆ.

ತಕ್ಷಣ ಮದರಸಾಗಳನ್ನು ಮುಚ್ಚದಿದ್ದರೆ ನಿತ್ಯವು 10 ಸಾವಿರ ರೂಪಾಯಿ ದಂಡ ಪಾವತಿ ಮಾಡುವಂತೆ 12 ಮದರಸಾಗಳಿಗೆ ನೋಟಿಸ್​ ಹೊರಡಿಸಿರುವುದಾಗಿ ವರದಿ ತಿಳಿಸಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಮದರಸಾಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಮುಜಾಫರ್‌ನಗರದ ಮೂಲ ಶಿಕ್ಷಾ ಅಧಿಕಾರಿ ಶುಭಂ ಶುಕ್ಲಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸರಿಯಾದ ಅನುಮೋದನೆ ಇಲ್ಲದೆಯೇ ನೂರಾರು ಮದರಸಾಗಳು ಕಾರ್ಯಾಚರಣೆ ಮಾಡುತ್ತಿವೆ ಎಂದು ಮುಜಾಫರ್​ನಗರದ ಮೈನಾರಿಟಿ ಇಲಾಖೆ ಮಾಹಿತಿ ನೀಡಿದೆ. ಮದರಸಾಗಳನ್ನು ನೋಂದಣಿ ಮಾಡಿಸಿಕೊಳ್ಳಲು ತಿಳಿಸಲಾಗಿದೆ ಶುಭಂ ಶುಕ್ಲಾ ಹೇಳಿದ್ದಾರೆ.

ಮದರಸಾಗಳಿಗೆ ಶಿಕ್ಷಣ ಇಲಾಖೆಯ ನೀಡಿದ ನೋಟಿಸ್‌ನ್ನು “ಕಾನೂನುಬಾಹಿರ” ಎಂದು ಭಾರತೀಯ ಮುಸ್ಲಿಮರ ಸಂಘಟನೆಯಾದ ಜಮಿಯತ್ ಉಲಾಮಾ-ಇ-ಹಿಂದ್ ಹೇಳಿದೆ.

ಜಮಿಯತ್ ಉಲೇಮಾ-ಎ-ಹಿಂದ್‌ನ ಉತ್ತರ ಪ್ರದೇಶ ಘಟಕದ ಕಾರ್ಯದರ್ಶಿ ಮೌಲಾನಾ ಝಾಕಿರ್ ಹುಸೇನ್ ಮಾತನಾಡಿ, ರಾಜ್ಯದಲ್ಲಿ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಲು ಅಕ್ರಮ ನೋಟಿಸ್‌ಗಳನ್ನು ನೀಡುವ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದರು.

ಮದರಸಾಗಳು ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದು, ದಿನಕ್ಕೆ10,000 ದಂಡವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಹುಸೇನ್ ಹೇಳಿದರು.

ಟಾಪ್ ನ್ಯೂಸ್