ಬಾಲಕನಿಗೆ ವಿವಸ್ತ್ರಗೊಳಿಸಿ ಥಳಿತ; ಅಮಾನವೀಯ ಘಟನೆ ವರದಿ

ತಾನು ಕೊಟ್ಟಿದ್ದ 200ರೂ.ವಾಪಸ್ ಕೊಡುವಂತೆ ಕೇಳಿದ 16 ವರ್ಷದ ಬಾಲಕನಿಗೆ ಬಲವಂತವಾಗಿ ಮದ್ಯ ಕುಡಿಸಿ, ಸಹಪಾಠಿಗಳೆ ವಿವಸ್ತ್ರಗೊಳಿಸಿ ಥಳಿಸಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.

ಸೋಮವಾರ ಈ ಘಟನೆ ನಡೆದಿದ್ದು, ಎರಡು ದಿನಗಳ ನಂತರ ವಿವಸ್ತ್ರಗೊಳಿಸಿ ಥಳಿಸಿರುವ ವಿಡಿಯೋಗಳನ್ನು ಆರೋಪಿತ ಬಾಲಕರು ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.‘ಬೆಲ್ಟ್ ಮತ್ತು ದೊಣ್ಣೆಗಳಿಂದ ಹೊಡೆದು, ತಮ್ಮ ಫೋನ್‌ಗಳಲ್ಲಿ ಹಲ್ಲೆ ನಡೆಸಿರುವುದನ್ನು ರೆಕಾರ್ಡ್ ಮಾಡಿಕೊಂಡರು. ಆ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ’ ಎಂದು ಬಾಲಕ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ.

ಆರೋಪಿತ ಬಾಲಕರು ಸಂತ್ರಸ್ತನನ್ನು ಅವಾಚ್ಯವಾಗಿ ನಿಂದಿಸುತ್ತಾ, ಬಟ್ಟೆ ಕಳಚುವಂತೆ ಬಲವಂತ ಮಾಡಿದ್ದಾರೆ. ಬಟ್ಟೆ ಬಿಚ್ಚಿಸದಂತೆ ಆತ ಮನವಿ ಮಾಡಿದಾಗ, ಅವರು ಬಾಲಕನ ಮುಖಕ್ಕೆ ಹೊಡೆದಿರುವ ದೃಶ್ಯ ವಿಡಿಯೋದಲ್ಲಿ ಸೆಯಾಗಿದೆ.

‘ವಿಡಿಯೋ ವೈರಲ್ ಆಗಿರುವುದು ನನಗೆ ಮುಜುಗರ ಉಂಟುಮಾಡಿದ್ದು, ತಾನು ತುಂಬಾ ನೊಂದಿದ್ದೇನೆ’ ಎಂದು ಹೇಳಿರುವ ಬಾಲಕ, ತನ್ನ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಪೊಲೀಸರನ್ನು ಸಂಪರ್ಕಿಸಿದ್ದಾನೆ. ಇದೀಗ ದೂರು ದಾಖಲಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ನೇಹಿತನಿಗೆ ನೀಡಿದ್ದ 200 ಸಾಲವನ್ನು ವಾಪಸ್ ಕೊಡುವಂತೆ ಕೇಳಿದ್ದಾಗಿ ಬಾಲಕ ಪೊಲೀಸರಿಗೆ ತಿಳಿಸಿದ್ದು, ಸುಮಾರು ಎರಡು ತಿಂಗಳ ಹಿಂದೆ ಹಣ ಕೇಳಿದ್ದಕ್ಕೆ ಜಗಳ ನಡೆದಿತ್ತು ಎಂದು ಆತ ಮಾಹಿತಿ ನೀಡಿದ್ದಾನೆ. ಕಳೆದ ಸೋಮವಾರ ಬಾಲಕ ಮತ್ತು ಅವನ ಸ್ನೇಹಿತ ಉದ್ಯಾನವನದಲ್ಲಿ ಹರಟೆ ಹೊಡೆಯುತ್ತಿದ್ದರು. ಹಣ ಪಡೆದಿದ್ದ ಆತನ ಸಹಪಾಠಿ ಸೇರಿದಂತೆ ನಾಲ್ವರು ಕಾರಿನಲ್ಲಿ ಪಾರ್ಕಿಗೆ ಬಂದು ಅವನನ್ನು ಕರೆದರು. ಬಳಿಕ ಅಲ್ಲಿ ಇನ್ನಿಬ್ಬರು ಕಾಯುತ್ತಿರುವುದನ್ನು ಬಾಲಕ ಕಂಡಿದ್ದಾನೆ. ಅವರು ಕುಡಿದು ಹುಡುಗನನ್ನು ಕುಡಿಯಲು ಒತ್ತಾಯಿಸಿದ್ದು, ನಂತರ ಹಲ್ಲೆ ಆರಂಭಿಸಿದ್ದಾರೆ. ಆರು ಮಂದಿ ಹುಡುಗರು ದೊಣ್ಣೆ ಮತ್ತು ಬೆಲ್ಟ್‌ಗಳಿಂದ ಹೊಡೆದು ಬಲವಂತವಾಗಿ ಬಟ್ಟೆ ಬಿಚ್ಚಿಸಿದ್ದರು ಎಂದು ಬಾಲಕ ಆರೋಪಿಸಿದ್ದಾನೆ.

ಟಾಪ್ ನ್ಯೂಸ್