ಭೂ ಒತ್ತುವರಿ ಮಾಡಿಕೊಂಡಿರುವ ಕುರಿತು ತಾನು ನೀಡಿರುವ ದೂರನ್ನು ಸ್ವೀಕರಿಸದೆ ಪೊಲೀಸರು ನಿರ್ಲಕ್ಷಿಸಿದ್ದಾರೆಂದು ಆರೋಪಿಸಿ ದಲಿತ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರಪ್ರದೇಶದ ಬಲರಾಂಪುರದಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಗೈದಾಸ್ ಬುಜುರ್ಗ್ ಠಾಣಾಧಿಕಾರಿ ಪವನ್ ಕುಮಾರ್ ಅವರನ್ನು ಬಲರಾಂಪುರ ಪೊಲೀಸ್ ವರಿಷ್ಠಾಧಿಕಾರಿ ಕೇಶವಕುಮಾರ್ ಅಮಾನತುಗೊಳಿಸಿದ್ದಾರೆ.
ಜಾಗವನ್ನು ಒತ್ತುವರಿ ಮಾಡಿಕೊಂಡು ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡುತ್ತಿದ್ದಾರೆ ಎಂದು ದೂರು ದಾಖಲಿಸಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದಲಿತ ವ್ಯಕ್ತಿ ರಾಮ್ ಬುಜ್‌ಹರತ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ಕೇಶವ್ ಕುಮಾರ್ ತಿಳಿಸಿದ್ದಾರೆ.
ಅ.24ರಂದು ರಾಮ್ ಬುಜ್‌ಹರತ್ ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರವಾಗಿರುವ ಅವರನ್ನು ಲಕ್ನೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಹೇಳಲಾಗಿದೆ.
ದಲಿತ ವ್ಯಕ್ತಿಯ ಆತ್ಮಹತ್ಯೆ ಯತ್ನ ಪ್ರಕರಣದ ಕುರಿತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ನಮ್ರತಾ ಶ್ರೀವಾತ್ಸವ್ ಅವರು ತನಿಖೆ ನಡೆಸಿದ್ದು, ಈ ವೇಳೆ ಗೈದಾಸ್ ಬುಝುರ್ಗ್ ಪೊಲೀಸ್ ಠಾಣೆಯ ಅಧಿಕಾರಿ ಪವನ್ ಕುಮಾರ್ ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದಿದೆ. ತನಿಖಾ ವರದಿಯ ಆಧಾರದಲ್ಲಿ ಎಸ್ಪಿ ಠಾಣಾಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ.