ಪ್ಯಾಲೆಸ್ತೀನ್ ನಿರಾಶ್ರಿತರ ರಕ್ಷಣೆಗೆ ಕಾರ್ಯಚರಿಸುತ್ತಿರುವ UNRWA ಇಸ್ರೇಲ್ ದಾಳಿಯ ಮಧ್ಯೆ ಗಾಝಾದಲ್ಲಿ ಸೃಷ್ಟಿಯಾದ ವಿಪತ್ತಿನ ಪರಿಸ್ಥಿತಿಯಿಂದ ಜನರನ್ನು ರಕ್ಷಿಸಿ ಎಂದು ಮನವಿ ಮಾಡಿದ್ದಾರೆ.
ಯುಎನ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ ಫಾರ್ ಪ್ಯಾಲೆಸ್ಟೈನ್ ರೆಪ್ಯೂಜೀಸ್ ನಿಯರ್ ಈಸ್ಟ್ (ಯುಎನ್‌ಆರ್‌ಡಬ್ಲ್ಯುಎ) ಗಾಝಾದಲ್ಲಿನ ಪ್ಯಾಲೆಸ್ತೀನ್ ನಿರಾಶ್ರಿತರನ್ನು ರಕ್ಷಿಸಲು ತುರ್ತು ಮನವಿಯನ್ನು ಮಾಡಿದೆ.
ದಯವಿಟ್ಟು ಗಾಝಾವನ್ನು ಉಳಿಸಿ, ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ, ಗಾಝಾವನ್ನು ಉಳಿಸಿ. ಅದು ನಾಶವಾಗುತ್ತಿದೆ ಎಂದು ಯುಎನ್‌ಆರ್‌ಡಬ್ಲ್ಯುಎ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಯುಎನ್‌ಆರ್‌ಡಬ್ಲ್ಯುಎ ಆಶ್ರಯ ತಾಣಗಳ ಮುಖ್ಯಸ್ಥ ಹೇಳಿದ್ದಾರೆ.
ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿದ ನಂತರ, ಇಸ್ರೇಲಿ ಮಿಲಿಟರಿ ಉತ್ತರ ಗಾಜಾದಲ್ಲಿ ವಾಸಿಸುವ 1.1 ಮಿಲಿಯನ್ ಪ್ಯಾಲೆಸ್ತೀನಿಯನ್ನರನ್ನು ದಕ್ಷಿಣಕ್ಕೆ ಸ್ಥಳಾಂತರಕ್ಕೆ ಸೂಚಿಸಿತ್ತು. ಇದರ ಬಳಿಕ ಸಾವಿರಾರು ಕುಟುಂಬಗಳು ವಾಹನಗಳಲ್ಲಿ ಮತ್ತು ಕಾಲ್ನಡಿಗೆಯಲ್ಲಿ ಮನೆಬಿಟ್ಟು ತೆರಳುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ UNRWA ಆಶ್ರಯ ತಾಣಗಳ ಮುಖ್ಯಸ್ಥರು, ಮಕ್ಕಳು, ವೃದ್ಧರು ಮತ್ತು ವಯಸ್ಕರಿಗೆ ನಾವು ಎಲ್ಲವನ್ನೂ ಒದಗಿಸಲು ಸಾಧ್ಯವಾಗುತ್ತಿಲ್ಲ. ನಾನು UNRWA ಆಶ್ರಯದ ಮುಖ್ಯಸ್ಥನಾಗಿದ್ದೇನೆ ಆಹಾರ, ನೀರನ್ನು ಕೂಡ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ವೀಡಿಯೊವೊಂದರಲ್ಲಿ UNRWA ಆಶ್ರಯ ತಾಣದ ಹಲಾಸ್ ಸಹಾಯಕ್ಕಾಗಿ ಭಾವನಾತ್ಮಕ ಮನವಿಯನ್ನು ಮಾಡಿದ್ದಾರೆ. ನನ್ನ ಆಶ್ರಯದಲ್ಲಿರುವ ನಿರಾಶ್ರಿತರಿಗೆ ಅಗತ್ಯ ಔಷಧಗಳು ಮತ್ತು ಆಹಾರವನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ನಾವು ಈಗ ಇರುವ ಪರಿಸ್ಥಿತಿಯನ್ನು ಪದಗಳಿಂದ ವಿವರಿಸಲು ಸಾಧ್ಯವಿಲ್ಲ ಎಂದು ಹಲಾಸ್ ವೀಡಿಯೊದಲ್ಲಿ ಹೇಳಿದ್ದು, 15,000 ಪ್ಯಾಲೇಸ್ತೀನ್ ನಿರಾಶ್ರಿತರು ಆಶ್ರಯದಲ್ಲಿದ್ದಾರೆ ಎಂದು ಹೇಳಿದರು. ಅವರು ಆಹಾರ, ನೀರಿಲ್ಲದೆ ತಮ್ಮ ಮನೆಗಳನ್ನು ತೊರೆದರು. ನಿರಾಶ್ರಿತರಲ್ಲಿ ಸಕ್ಕರೆ ಕಾಯಿಲೆ ಇರುವವರು, ಅಂಗವಿಕಲ ಶಿಶುಗಳು ಹಾಗೂ ಈಗ ಸಿಡುಬು ರೋಗಕ್ಕೆ ತುತ್ತಾಗಿರುವ ಮಕ್ಕಳು ಇದ್ದಾರೆ ಎಂದು ಹೇಳಿದ್ದಾರೆ
ಆಹಾರ, ಸ್ನಾನಗೃಹಗಳು, ನೀರು, ವಿದ್ಯುಚ್ಛಕ್ತಿಯ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತಿಲ್ಲ. ಸದ್ಯದಲ್ಲೇ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ. ಅವರ ಅಗತ್ಯಗಳನ್ನು ಹೇಗೆ ಪೂರೈಸುವುದು ಎಂದು ನಮಗೆ ತಿಳಿದಿಲ್ಲ. ಇಲ್ಲಿ ಏನೂ ಇಲ್ಲ ಎಂದು ಹಲಾಸ್ ಹೇಳಿದ್ದಾರೆ.
ನಾವು ಅವರಿಗೆ ಆಹಾರ ಮತ್ತು ನೀರು ನೀಡುವಂತೆ ಸಹಾಯ ಹುಡುಕುತ್ತಿದ್ದೇವೆ. ಅವರು ಏನೂ ಇಲ್ಲದೆ ಬಂದಿದ್ದಾರೆ. ಆದರೆ ಅವರು ಭಿಕ್ಷುಕರಲ್ಲ. ಅವರಲ್ಲಿ ಹಣ ಇದೆ. ಆದರೆ ನಾವು ಬೇಕಿದ್ದ ನೀರು ಆಹಾರ ಎಲ್ಲಿ ಖರೀದಿಸಬಹುದು? ನಮಗೆ ಇನ್ಸುಲಿನ್ ಬೇಕು, ಜನರು ಸಾಯುತ್ತಿದ್ದಾರೆ. ನಾವು ಅವರಿಗೆ ಏನನ್ನೂ ನೀಡಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿಯು ದುರಂತ ಪರಿಸ್ಥಿತಿಯಾಗಿದೆ ಎಂದು ಹೇಳಿದ್ದಾರೆ.
ಎಕ್ಸ್‌ನಲ್ಲಿನ ಮತ್ತೊಂದು ಪೋಸ್ಟ್‌ನಲ್ಲಿ UNRWA ಸಿಬ್ಬಂದಿ ಅಜ್ಜಮ್ ಅವರು ಈ ದಿನಗಳಲ್ಲಿ ಗಾಜಾದಲ್ಲಿ ಬದುಕುವುದು ಮಾತ್ರವಲ್ಲ, ಸ್ನಾನಕ್ಕೆ ಸ್ವಲ್ಪ ನೀರು ಹೊಂದುವುದು ಪಂಚತಾರಾ ಹೋಟೆಲ್‌ನಲ್ಲಿ ಇದ್ದಂತೆ ಮತ್ತು ಫೋನ್‌ನ್ನು ಸಂಪೂರ್ಣವಾಗಿ ಚಾರ್ಜ್ ಮಾಡುವುದು ಒಂದು ಕನಸಾಗಿದೆ ಎಂದು ಹೇಳಿದ್ದಾರೆ.
ಅ.7 ರಿಂದ 4,23,000ಕ್ಕೂ ಹೆಚ್ಚು ಜನರು ಈಗಾಗಲೇ ಸ್ಥಳಾಂತರಗೊಂಡಿದ್ದಾರೆ ಎಂದು UNRWA ಹೇಳಿದೆ. ಅವರಲ್ಲಿ 2,70,000ಕ್ಕೂ ಹೆಚ್ಚು ಜನರು UNRWA ಆಶ್ರಯದಲ್ಲಿ ಆಶ್ರಯ ಪಡೆದಿದ್ದಾರೆ. ಅವರಲ್ಲಿ 50,000 ಗರ್ಭಿಣಿಯರಿದ್ದಾರೆ. ಈ ಪೈಕಿ ಸುಮಾರು 5,500 ಮಹಿಳೆಯರು ತುಂಬು ಗರ್ಭಿಣಿಯರಾಗಿದ್ದಾರೆ ಎಂದು ಹೇಳಿದೆ.
ಇಲ್ಲಿ ಇಂಟರ್‌ನೆಟ್ ಲಭ್ಯತೆ ಕನಸಾಗಿದೆ. ಇವು ಅಕ್ಷರಶಃ ನಿದ್ದೆಯಿಲ್ಲದ ರಾತ್ರಿಗಳು, ಸೂರ್ಯೋದಯಕ್ಕೆ ಮೊದಲೇ ಬೃಹತ್ ಬಾಂಬ್ ಸ್ಫೋಟವು ಪ್ರಾರಂಭವಾಗುತ್ತದೆ. ಪ್ರತಿ 10 ಅಥವಾ 15 ನಿಮಿಷಗಳಿಗೊಮ್ಮೆ ಶಬ್ಧಗಳು ಕೇಳಿಸುತ್ತಿದೆ. ಹಗಲು ಹೊತ್ತಿನಲ್ಲಿ ಬಾಂಬ್ ಸ್ಫೋಟವು ನಿಲ್ಲುವುದಿಲ್ಲ ಆದರೆ ಅದು ಕಡಿಮೆ ಪ್ರಮಾಣದ್ದಾಗಿದೆ ಆದರೆ ಕತ್ತಲೆಯ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಬಾಂಬ್ ದಾಳಿ ಶಬ್ಧಗಳು ಕೇಳುತ್ತಿದೆ ಎಂದು ಅಜ್ಜಮ್ ಹೇಳಿದ್ದಾರೆ.