ಇಸ್ರೇಲ್‌ನಿಂದ ಅಮಾನವೀಯ ಕೃತ್ಯ: ಗಾಝಾದ ನಾಗರಿಕರಿಗೆ ನೀರು ಸಿಗದಂತೆ ಬಾವಿಗಳು ಮತ್ತು ನೀರಿನ ಘಟಕಗಳ ಧ್ವಂಸ

ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಹತ್ಯಾಕಾಂಡಕ್ಕೆ ಬಲಿಯಾದವರ ಸಂಖ್ಯೆ 24,000 ದಾಟಿದೆ. ಗಾಝಾದಲ್ಲಿ ನಾಗರಿಕರ ನಿರಂತರ ಸಾವಿನ ಹೆಚ್ಚಳದ ಮಧ್ಯೆ ಇಸ್ರೇಲ್ ಉತ್ತರ ಗಾಝಾದಲ್ಲಿ ಬಾವಿಗಳು ಮತ್ತು ನೀರಿನ ಘಟಕಗಳ ಮೇಲೆ ಬಾಂಬ್ ದಾಳಿ ನಡೆಸಿ ಅದನ್ನು ಕಲುಷಿತಗೊಳಿಸುತ್ತಿದೆ ಮತ್ತು ನಾಗರಿಕರಿಗೆ ಕುಡಿಯಲು ಯೋಗ್ಯ ನೀರು ಸಿಗದಂತೆ ಮಾಡುತ್ತಿದೆ.

ಗಾಝಾದಲ್ಲಿ ಸುಮಾರು ಎರಡು ಮಿಲಿಯನ್ ಜನರು ತೀವ್ರ ಆಹಾರ ಮತ್ತು ನೀರಿನ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ಯುಎನ್ ಹೇಳಿದೆ. ಲಭ್ಯವಿರುವ ನೀರಿನ ಪೂರೈಕೆಯಲ್ಲಿ 96 ಪ್ರತಿಶತ ಮಾನವ ಬಳಕೆಗೆ ಅನರ್ಹವಾಗಿದೆ ಎಂದು ಅಂದಾಜಿಸಲಾಗಿದೆ. ಇಸ್ರೇಲ್ ಪಡೆಗಳು ಉತ್ತರ ಗಾಝಾದಲ್ಲಿ ಬಾವಿಗಳು ಮತ್ತು ನೀರಿನ ಘಟಕಗಳ ಮೇಲೆ ಬಾಂಬ್ ದಾಳಿ ನಡೆಸಿವೆ. ನೀರಿನ ಮೂಲವನ್ನು ಒಡೆದು ಹಾಕುವ ಜೊತೆಗೆ ನೀರನ್ನು ಕುಡಿಯಲು ಅಯೋಗ್ಯವನ್ನಾಗಿ ಮಾಡುತ್ತಿದೆ.

ಮಘಜಿ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವಾಯು ದಾಳಿ ನಡೆಸಿ 70 ನಾಗರಿಕರನ್ನು ಹತ್ಯೆ ಮಾಡಿರುವುದನ್ನು ಪ್ಯಾಲೆಸ್ತೀನ್ನ ಆರೋಗ್ಯ ಸಚಿವಾಲಯದ ವಕ್ತಾರರು ದೃಢಪಡಿಸಿದ್ದು, ಇದನ್ನು ನಿರಾಶ್ರಿತರ ಶಿಬಿರದಲ್ಲಿನ ಹತ್ಯಾಕಾಂಡ ಎಂದು ಹೇಳಿಕೊಂಡಿದ್ದಾರೆ.
ಪ್ಯಾಲೆಸ್ತೀನ್ನ ಪತ್ರಕರ್ತರು ಸೆರೆಹಿಡಿದ ಮತ್ತು ಅಲ್ ಜಜೀರಾ ವರದಿ ಮಾಡಿದ ವರದಿಯ ದೃಶ್ಯಾವಳಿಗಳು ಘಟನೆಯಲ್ಲಿ ನವಜಾತ ಶಿಶುಗಳು ಸೇರಿದಂತೆ ಯುದ್ಧ ಬಲಿಪಶುಗಳು ಇರುವುದನ್ನು ಸೂಚಿಸುತ್ತದೆ. ಹತ್ತಾರು ದೇಹಗಳನ್ನು ಗಾಝಾದ ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕೇಂದ್ರ ಗಾಝಾದ ನಿರಾಶ್ರಿತರ ಶಿಬಿರಗಳ ಬಳಿ ಮುಖ್ಯ ರಸ್ತೆಗಳ ಮೇಲೆ ಇಸ್ರೇಲ್ ವಾಯು ದಾಳಿಗಳ ಮೂಲಕ ಆಂಬ್ಯುಲೆನ್ಸ್‌ಗಳು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳಿಗೆ ಗಾಯಗೊಂಡ ಜನರನ್ನು ರಕ್ಷಿಸಲು ಅಡ್ಡಿಪಡಿಸುತ್ತಿದೆ.

ಗಾಝಾದ ದಕ್ಷಿಣ ನಗರವಾದ ಖಾನ್ ಯೂನಿಸ್ ನಗರವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ತಿಂಗಳುಗಳು ತೆಗೆದುಕೊಳ್ಳಬಹುದು ಎಂದು ಇಸ್ರೇಲ್ನ ಮಿಲಿಟರಿ ಹೇಳುತ್ತಿದೆ. ಭಾನುವಾರ ಪ್ರಕಟವಾದ ವಾಲ್ ಸ್ಟ್ರೀಟ್ ಜರ್ನಲ್ ವರದಿಯಲ್ಲಿ ಹಿರಿಯ ಇಸ್ರೇಲ್ ಮಿಲಿಟರಿ ಅಧಿಕಾರಿಯೊಬ್ಬರು ಇಸ್ರೇಲ್ ಪಡೆಗಳು ಉತ್ತರ ಗಾಝಾದಲ್ಲಿ ಮಾಡಿದ ರೀತಿಯಲ್ಲಿಯೇ ನಿಯಂತ್ರಣವನ್ನು ಸಾಧಿಸಲು ತಿಂಗಳುಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.

ಯುದ್ಧ ಘೋಷಣೆ ಬಳಿಕ ಇಸ್ರೇಲ್ ಗಾಝಾ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಠ 24,424ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 54,036 ಮಂದಿ ಗಾಯಗೊಂಡಿದ್ದಾರೆ ಎಂದು ಇತ್ತೀಚಿನ ಅಂಕಿ-ಅಂಶಗಳು ಬಹಿರಂಗಪಡಿಸುತ್ತಿದೆ. ಮೃತರಲ್ಲಿ 60% ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಅಂಕಿ-ಅಂಶಗಳು ಬಹಿರಂಗಪಡಿಸಿದೆ.

ಟಾಪ್ ನ್ಯೂಸ್