ಉಡುಪಿ:ಮಗನ ಸಾವಿನ ದುಃಖದಲ್ಲೂ ಕುಟುಂಬವೊಂದು 7 ಜನರಿಗೆ ಆತನ ಅಂಗಾಂಗ ದಾನ ಮಾಡಿ ಮಾದರಿಯಾಗಿದ್ದಾರೆ.
ಭದ್ರಾವತಿ ನಿವಾಸಿಯಾಗಿರುವ ಉಲ್ಲಾಸ್(21) ಅಪಘಾತವಾಗಿತ್ತು.ಭದ್ರಾವತಿ ತಾಲೂಕಿನ ಚೆನ್ನಗಿರಿ ರಸ್ತೆಯಲ್ಲಿ ಏ.22ರಂದು ಮದ್ಯಾಹ್ನ ರಸ್ತೆ ಅಪಘಾತ ಸಂಭವಿಸಿತ್ತು.
ಗಂಭೀರವಾಗಿ ಗಾಯಗೊಂಡಿದ್ದ ಉಲ್ಲಾಸ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ಏ.23ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆಸ್ಪತ್ರೆಯ ವೈದ್ಯರು ಯುವಕನ ರಕ್ಷಣೆಗೆ ಸತತ ಪ್ರಯತ್ನ ಮಾಡಿದ್ದಾರೆ.ಆದರೆ ಕೊನೆಗೆ ಆತನ ಮೆದುಳು ನಿಷ್ಕ್ರಿಯಗೊಂಡಿರುವುದು ತಿಳಿದು ಬಂದಿದೆ.
ಅಧಿಕೃತವಾಗಿ ಪರಿಣಿತ ವೈದ್ಯರ ತಂಡವು ರೋಗಿಯ ಮೆದುಳು ನಿಷ್ಕ್ರೀಯತೆ ಬಗ್ಗೆ ಮಾಹಿತಿ ನೀಡಿದಾಗ ಉಲ್ಲಾಸ್ ಪೋಷಕರು ಅಂಗಾಂಗ ದಾನ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
ಪೋಷಕರ ಇಚ್ಚೆಯಂತೆ ಏಳು ಮಂದಿಯ ಜೀವನಕ್ಕೆ ಉಲ್ಲಾಸ್ ಬೆಳಕಾಗಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.
ಯುವಕನ ಶ್ವಾಸಕೋಶಗಳನ್ನು ಚೆನ್ನೈನ ಅಪೊಲೊ ಆಸ್ಪತ್ರೆಗೆ, ಯಕೃತ್ ಅನ್ನು ಬೆಂಗಳೂರಿನ ಅಸ್ಟರ್ ಸಿಎಂಐ ಆಸ್ಪತ್ರೆಗೆ, ಒಂದು ಮೂತ್ರಪಿಂಡವನ್ನು ಎಜೆ ಆಸ್ಪತ್ರೆ ಮಂಗಳೂರು ಮತ್ತು ಎರಡು ಕಾರ್ನಿಯಾಗಳು ಹಾಗೂ ಒಂದು ಮೂತ್ರಪಿಂಡವನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿನ ನೋಂದಾಯಿತ ರೋಗಿಗಳಿಗೆ ಕಸಿಮಾಡಲಾಗುತ್ತದೆ ಎನ್ನಲಾಗಿದೆ.