-ಬಿ.ಫಾತಿಮಾ(85)ಮೃತಪಟ್ಟವರು.
ಉಳ್ಳಾಲ:ಕಾರು ಹೆದ್ದಾರಿ ಬದಿಯ ಕಬ್ಬಿಣದ ಸಲಾಕೆಯ ತಡೆಬೇಲಿಗೆ ಢಿಕ್ಕಿ ಹೊಡೆದ ಪರಿಣಾಮ ವೃದ್ಧೆ ಮೃತಪಟ್ಟು,ಇಬ್ಬರು ಗಾಯಗೊಂಡ ಘಟನೆ ಉಚ್ಚಿಲ ಎಂಬಲ್ಲಿ ಇಂದು ಮುಂಜಾನೆ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ಮಂಜೇಶ್ವರ,ಕುಂಜತ್ತೂರು ನಿವಾಸಿ ಬಿ.ಫಾತಿಮಾ(85)ಮೃತಪಟ್ಟವರು.
ಫಾತಿಮಾ ಅವರು ತನ್ನ ಮಗ ಮೂಸ(50) ಮೊಮ್ಮಗ ಮಸ್ತಫಾ(24) ಜೊತೆ ಮಂಗಳೂರಿನಲ್ಲಿ ಸಂಬಂಧಿಕರೋರ್ವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ವೇಳೆ ಘಟನೆ ನಡೆದಿದೆ.
ಫಾತಿಮಾ ಓಮ್ನಿ ಕಾರಿನ ಮುಂಭಾಗದಲ್ಲಿ ಕುಳಿತಿದ್ದು ಮೊಮ್ಮಗ ಮುಸ್ತಫಾ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ. ನಿದ್ದೆ ಮಂಪರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ತಡೆಬೇಲಿಗೆ ಕಾರು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಈ ವೇಳೆ ಮಾಹಿತಿ ತಿಳಿದು ತಲಪಾಡಿಯಲ್ಲಿ ಗಸ್ತಲ್ಲಿದ್ದ ಟ್ರಾಫಿಕ್ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಕಬ್ಬಿಣದ ಸಲಾಕೆ ಎಡೆಯಲ್ಲಿ ಸಿಲುಕಿದ್ದ ಫಾತಿಮಾರನ್ನು ಹೊರ ತೆಗೆದಿದ್ದಾರೆ.ಮೂವರನ್ನು ಕೂಡ ಪೊಲೀಸ್ ವಾಹನದಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಈ ಕುರಿತು ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.