ಉಡುಪಿ;ಯುವಕನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಉಡುಪಿ ಬಬ್ಬುಸ್ವಾಮಿ ದೇವಸ್ಥಾನದ ಬಳಿ ನಡೆದಿದೆ.
ಹಲ್ಲೆ ಆರೋಪಿಸಿ ಉಮೇಶ್ ಮೆಂಡನ್ ಎಂಬವರ ಮಗ ಶರತ್ ಎಂಬವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರು ಚರಣ್ ಎಂಬಾತನೊಂದಿಗೆ ಬೈಕ್‌ನಲ್ಲಿ ಹೋಗುತ್ತಿರುವಾಗ ಬೈಕಿನಲ್ಲಿ ಬಂದ ನಾಗರಾಜ್, ಕಾರ್ತಿಕ್, ದೇಶರಾಜು ಮತ್ತು ಇತರರು ಅಡ್ಡಗಟ್ಟಿ ತಡೆದು ನಿಲ್ಲಿಸಿದ್ದು, ಬಳಿಕ ಕೊಲ್ಲುವ ಉದ್ದೇಶದಿಂದ ಅವರು ತಂದಿದ್ದ ಚೂರಿಗಳಿಂದ ಏಕಾಏಕಿ ಶರತ್ ರನ್ನು ತಿವಿದು ಗಾಯಗೊಳಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇತ್ತೀಚೆಗೆ ಆರೋಪಿಗಳು ಶರತ್‌ನ ತಮ್ಮ ದೀಪಕ್ ಎಂಬವರಿಗೆ ಹಲ್ಲೆ ಮಾಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಶರತ್ ಆರೋಪಿಗಳಿಗೆ ಗದರಿಸಿದ್ದು ಇದೇ ಈ ಕೃತ್ಯಕ್ಕೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.