ಉಡುಪಿ: ನೇಜಾರಿನಲ್ಲಿ ನಡೆದ ತಾಯಿ ಮಕ್ಕಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯ ಭಾಗವಾಗಿ ಪೊಲೀಸರು ಆರೋಪಿಯನ್ನು ಸ್ಥಳಕ್ಕೆ ಮಹಜರಿಗೆ ಕರೆದುಕೊಂಡು ಹೋದಾಗ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗಿದ್ದು, ಈ ವೇಳೆ ಪೊಲೀಸರು ಲಾಠೀ ಚಾರ್ಜ್ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ತಾಯಿ-ಮಕ್ಕಳ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗುಲೆ(39)ಯನ್ನು ಪೊಲೀಸರು ಸ್ಥಳ ಮಹಜರು ನಡೆಸಲು ತೃಪ್ತಿ ಲೇಔಟ್ ನ ಕೃತ್ಯ ನಡೆದ ಮನೆಗೆ ಕರೆದುಕೊಂಡು ಬಂದಿದ್ದಾರೆ.
ಈ ವೇಳೆ ಸ್ಥಳದಲ್ಲಿ ಸೇರಿದ್ದ ಆಕ್ರೋಶಿತರ ಗುಂಪು ಆರೋಪಿಗೆ ಹಲ್ಲೆ ನಡೆಸಲು ಮುಂದಾಗಿದ್ದು ಆರೋಪಿಯನ್ನು ತಮ್ಮ ಕೈಗೆ ಒಪ್ಪಿಸುವಂತೆ ಒತ್ತಾಯಿಸಿದ್ದಾರೆ. ಆತನಿಗೆ ಬದುಕುವ ಹಕ್ಕು ಇಲ್ಲ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಮಹಜರು ಪ್ರಕ್ರಿಯೆ ಮುಗಿಸಿ ಆರೋಪಿಯನ್ನು ವಾಪಾಸು ಕರೆದುಕೊಂಡು ಹೋಗುವ ವೇಳೆ ನೂರಾರು ಸಂಖ್ಯೆಯಲ್ಲಿದ್ದ ಜನರು ಆರೋಪಿಯ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ಗುಂಪನ್ನು ಚದುರಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು
ಬಳಿಕ ಜನರು ಲಾಠಿ ಚಾರ್ಜ್ ಖಂಡಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.