ಉಡುಪಿ;ಯುವಕನ ಮೇಲಿನ ಹಲ್ಲೆ ಮತ್ತು ಜೀವಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದ ಎಸ್ಐ ಮತ್ತು ಇನ್ಸ್ ಪೆಕ್ಟರ್ ಗೆ ಉಡುಪಿ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ನ.28ರಂದು ಜಾಮೀನು ರಹಿತ ವಾರಂಟ್ ಜಾರಿಗೊಳಿಸಿ ಆದೇಶಿದೆ.
ಮಲ್ಪೆಯಲ್ಲಿ ಎಸ್ ಐ ಆಗಿದ್ದ ಶಕ್ತಿವೇಲು ಮತ್ತು ಪೊಲೀಸ್ ನಿರೀಕ್ಷಕ ಶರಣಗೌಡ ವಿರುದ್ಧ ಉಡುಪಿ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿ ಆದೇಶ ಹೊರಡಿಸಿದೆ.
2021ರ ನ.29ರ ತಡರಾತ್ರಿ ಸುಮಾರು 2.30 ರ ವೇಳೆಗೆ
ಉಡುಪಿ ಹೂಡೆಯ ನಿವಾಸಿ ಹಿದಾಯತುಲ್ಲ (27) ಅವರ ಮನೆಗೆ ಪೊಲೀಸ್ ಅಧಿಕಾರಿಗಳಾದ ಶಕ್ತಿವೇಲು ಸಹಿತ ಏಳು ಮಂದಿ ತಂಡ ಅಕ್ರಮವಾಗಿ ನುಗ್ಗಿ ಹಿದಾಯತುಲ್ಲ ಅವರಿಗೆ ಥಳಿಸಿ ಬಂಧಿಸಿದ್ದರು. ಬಳಿಕ ಠಾಣೆಗೆ ಕರೆದುಕೊಂಡು ಹೋಗಿ ಅಲ್ಲಿ ಬೂಟು ಮತ್ತು ಲಾಠಿಯಿಂದ ಹಲ್ಲೆ ನಡೆಸಿ ತಪ್ಪೊಪ್ಪಿಗೆ ಪತ್ರಕ್ಕೆ ಸಹಿ ಮಾಡುವಂತೆ ಕಿರುಕುಳ ನೀಡಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಹಲ್ಲೆಯಿಂದ ಗಂಭೀರವಾಗಿದ್ದ ಹಿದಾಯತುಲ್ಲಗೆ 2021 ರ ಡಿ. 4ರಂದು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಘಟನೆಯ ಬಗ್ಗೆ ನ್ಯಾಯಕ್ಕೆ ಆಗ್ರಹಿಸಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿದಾಯತುಲ್ಲಾ ಉಡುಪಿ ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಕುರಿತು ದೂರನ್ನು ಮಾನ್ಯ ಮಾಡಿದ ನ್ಯಾಯಾಲಯ ಮಲ್ಪೆ ಠಾಣೆಯ ಅಂದಿನ ಎಸ್.ಐ. ಶಕ್ತಿವೇಲು ಮತ್ತು ಸರ್ಕಲ್ ಶರಣಗೌಡ ವಿರುದ್ಧ ದೂರು ದಾಖಲಿಸಲು ಆದೇಶಿಸಿತ್ತು. ಅನಂತರ ನ್ಯಾಯಾಲಯಕ್ಕೆ ಆರೋಪಿಗಳು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆ ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿದೆ.