ಉಡುಪಿ;ಈದ್ ಗೆ ಸಂಬಂಧಿಕರ ಮನೆಗೆ ಬಂದು ಹೊಳೆಯಿಂದ ಕಪ್ಪೆಚಿಪ್ಪು ಹೆಕ್ಕಲು ಹೋಗಿ ಸಂಭವಿಸಿದ ದುರಂತದಲ್ಲಿ ನೀರುಪಾಲಾಗಿದ್ದ ನಾಲ್ವರು ಯುವಕರ ಅಂತ್ಯಸಂಸ್ಕಾರ ಇಂದು ನಡೆದಿದೆ.ಬೆಳೆದು ನಿಂತ ಮಕ್ಕಳನ್ನು ಕಳೆದುಕೊಂಡು ಕುಟುಂಬ ದುಃಖದಿಂದ ಮುಳುಗಿದ್ದರೆ, ಊರಿಗೆ ಊರೇ ಮೌನವಾಗಿದೆ.
ಬ್ರಹ್ಮಾವರ ಹಾರಾಡಿ ಗ್ರಾಮದ ಕಿಣಿಯಾರ ಕುದ್ರು ಎಂಬಲ್ಲಿ ನಿನ್ನ ದೋಣಿ ಮಗುಚಿ ಬಿದ್ದು ಸಂಭವಿಸಿದ ಅವಘಡದಲ್ಲಿ
ಮೃತರನ್ನು ಶೃಂಗೇರಿಯ ಅಡ್ಡಗದ್ದೆಯ ಯಾಸೀನ್ ಎಂಬವರ ಮಗ ಮುಹಮ್ಮದ್ ಫರ್ಹಾನ್(16) ಆತನ ಅಣ್ಣ ಮುಹಮ್ಮದ್ ಸುಫಾನ್(20) ಹಾಗೂ ಇವರ ಸಂಬಂಧಿ ಹೂಡೆಯ ಮುಹಮ್ಮದ್ ಫೈಜಾನ್(18) ಹಾಗೂ ಹೂಡೆಯ ಮುಹಮ್ಮದ್ ಇಬಾದ್(25) ಎಂಬವರು ಮೃತಪಟ್ಟಿದ್ದಾರೆ.
ಇವರು ತೀರ್ಥಹಳ್ಳಿಯ ಸಾಹಿಲ್ ಖಾದರ್, ಕೊಪ್ಪದ ಮಾಹೀಮ್, ಅಡ್ಡಗದ್ದೆಯ ಶಾಹಿಲ್ ಎಂಬವರಂದಿಗೆ ದೋಣಿ ವಿಹಾರಕ್ಕೆಂದು ಕುಕ್ಕುಡೆ ಕುದ್ರುವಿಗೆ ಹೂಡೆಯಿಂದ ತೆರಳಿ ಕಪ್ಪೆಚಿಪ್ಪು ಹೆಕ್ಕಲು ಮುಂದಾಗಿದ್ದರು.
ದೋಣಿಯನ್ನು ಕಟ್ಟಿ ಎಲ್ಲರೂ ದೋಣಿಯಿಂದ ಇಳಿದು ಚಿಪ್ಪು ಹೆಕ್ಕುತ್ತ ಹೊಳೆಯ ನೀರಿನಲ್ಲಿ ಮುಂದೆ ಮುಂದೆ ಹೋದಾಗ ಫಾರನ್ ಜೊತೆಯಲ್ಲಿ ಸುಫಾನ್, ಇಬಾದ್, ಫೈಜಾನ್ ನೀರಿನ ಆಳದಲ್ಲಿ ಮುಳುಗಿ ಹೋದರು. ಉಳಿದ ಮೂವರು ನೀರಿನಲ್ಲಿ ಮುಳುಗಿದವರನ್ನು ರಕ್ಷಿಸಲು ಪ್ರಯತ್ನ ಪಟ್ಟರೂ ಪ್ರಯೋಜನವಾಗಲಿಲ್ಲ ಎಂದು ತಿಳಿದು ಬಂದಿದೆ.
ಎಲ್ಲ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸ ಲಾಗಿದೆ.ಸಂಜೆ ಮೃತ ನಾಲ್ವರ ಅಂತ್ಯಕ್ರಿಯೆಯನ್ನು ಹೂಡೆಯ ಖದೀಮ್ ಮಸೀದಿಯಲ್ಲಿ ನೆರವೇರಿಸಲಾಯಿತು. ಈ ವೇಳೆ
ಭಾರೀ ಜನಸಾಗರ ನೆರೆದಿದ್ದು ನೀರವ ಮೌನ ಸುತ್ತಮುತ್ತಲಿನ ಪ್ರದೇಶದಲ್ಲಿ ಆವರಿಸಿತ್ತು.
ದುರಂತದಲ್ಲಿ ಶೃಂಗೇರಿಯ ಅಡ್ಡಗದ್ದೆಯ ಉದ್ಯಮಿ ಯಾಸೀನ್ ಕುಟುಂಬವು ತನ್ನ ಇಬ್ಬರೂ ಮಕ್ಕಳನ್ನು ಕಳೆದುಕೊಂಡು ಅನಾಥವಾಗಿದೆ.ಮೃತ ಸುಫಾನ್ ದ್ವಿತೀಯ ಪದವಿ ಕಲಿಯುತ್ತಿದ್ದರೆ, ಆತನ ತಮ್ಮ ಫರ್ಹಾನ್ ಎಸೆಸೆಲ್ಸಿ ವಿದ್ಯಾರ್ಥಿಯಾಗಿದ್ದನು.ಕುಟುಂಬದವರ ನಿರ್ಧಾರದಂತೆ ಈ ಇಬ್ಬರೂ ಮಕ್ಕಳ ಅಂತ್ಯಕ್ರಿಯೆಯನ್ನು ಕೂಡ ಹೂಡೆಯಲ್ಲೇ ನಡೆಸಲಾಗಿದೆ.