ಮುಸ್ಲಿಂ ಎಂಬ ಕಾರಣಕ್ಕೆ ಸಂಚಾರಿ ಪೊಲೀಸ್ ಅಧಿಕಾರಿಗೆ ಬೆದರಿಕೆ? ವಾಸ್ತವವೇನು?
ರಾಜಸ್ಥಾನ;ಮುಸ್ಲಿಂ ಪೊಲೀಸ್ ಅಧಿಕಾರಿಗೆ ಹಿಂದೂ ವ್ಯಕ್ತಿ ಬೆದರಿಕೆ ಹಾಕಿದ್ದಾರೆ ಎಂದು ವಿಡಿಯೋ ಹರಿದಾಡಿತ್ತು.ಆದರೆ ಇದೀಗ ಅಸಲಿಯತ್ತು ಬಹಿರಂಗವಾಗಿದೆ.
ಚುರು ಎಂಬಲ್ಲಿ ಸಂಚಾರಿ ಪೊಲೀಸ್ ಸಮವಸ್ತ್ರದಲ್ಲಿರುವ ವ್ಯಕ್ತಿಯೊಬ್ಬರು ಅಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.ಹಿಂದೂ ವ್ಯಕ್ತಿ, ಮುಸ್ಲಿಂ ಸಮುದಾಯದ ಪೊಲೀಸ್‌ಗೆ ಬೆದರಿಕೆ ಹಾಕಿದ್ದಾರೆ ಎಂದು ವಿಡಿಯೊ ಜೊತೆ ಹೇಳಲಾಗಿದೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಪೊಲೀಸರಿಗೆ ಈ ಸ್ಥಿತಿ ಇದ್ದರೆ, ಸಾಮಾನ್ಯ ಜನರ ಪಾಡೇನು ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಹೇಳಿಕೊಂಡು ವಿಡಿಯೋ ಹಂಚಿಕೊಂಡಿದ್ದರು.
ಆದರೆ ಸಂಚಾರಿ ಪೊಲೀಸ್ ದಿರಿಸಿನಲ್ಲಿರುವ ವ್ಯಕ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂಬುದು ತಪ್ಪು ಮಾಹಿತಿ ಎಂದು ‘ದಿ ಲಾಜಿಕಲ್ ಇಂಡಿಯನ್’ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.
ಏ.17ರಂದು ಚುರುವಿನ ರಸ್ತೆಯೊಂದರಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ದಟ್ಟಣೆಗೆ ಕಾರಣವಾಗಿದ್ದ ದುಬಾರಿ ಕಾರನ್ನು ಸ್ಥಳದಿಂದ ತೆಗೆಯುವಂತೆ ಸಂಚಾರಿ ಪೊಲೀಸ್ ಜಗವೀರ್ ಸಿಂಗ್ ಸೂಚಿಸಿದ್ದರು.ಆದರೆ ಕಾರಿನಲ್ಲಿದ್ದ ನರೇಂದ್ರ ಸಿಂಗ್ ಎಂಬಾತ ಬೆದರಿಕೆ ಹಾಕಿದ್ದ. ತನಗೆ ಸಚಿವರು ಆಪ್ತರಾಗಿದ್ದು, ವರ್ಗಾವಣೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದ. ಬೇಸರದಿಂದ ಕಣ್ಣೀರು ಹಾಕಿದ್ದ ಜಗವೀರ್ ಸಿಂಗ್ ಅವರು ಠಾಣೆಗೆ ದೂರು ನೀಡಿದ್ದರು. ನಂತರ ಆರೋಪಿಯನ್ನು ಬಂಧಿಸಲಾಗಿತ್ತು.
ಅವರು ಮುಸ್ಲಿಂ ಆಗಿದ್ದರಿಂದ ಬೆದರಿಕೆ ಹಾಕಲಾಗಿತ್ತು ಎಂಬುದು ಸುಳ್ಳು ಸುದ್ದಿ ಎಂದು ‘ದಿ ಲಾಜಿಕಲ್ ಇಂಡಿಯನ್’ ವರದಿ ಮಾಡಿದೆ.