ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ

ಕೊಲ್ಹಾಪುರ: ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವೈಭವೀಕರಣ ಮಾಡಿ ಮಾಡಲಾಗಿದೆ ಎಂಬ ಪೋಸ್ಟ್‌ಗಳನ್ನು ವಿರೋಧಿಸಿ ಕೆಲವು ಹಿಂದೂ ಸಂಘಟನೆಗಳು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

ಕೋಲ್ಹಾಪುರದ ಛತ್ರಪತಿ ಶಿವಾಜಿ ಮಹಾರಾಜ್ ಚೌಕ್‌ನಲ್ಲಿ ಪ್ರತಿಭಟನಾಕಾರರು ಕೆಲವು ಅಂಗಡಿಗಳು ಮತ್ತು ವಾಹನಗಳನ್ನು ಧ್ವಂಸಗೊಳಿಸಿದಾಗ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು ಎಂದು ವರದಿಯಾಗಿದೆ.

ಕೆಲ ಕಿಡಿಗೇಡಿಗಳು ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ವೊಂದನ್ನು ಹಾಕಿದ್ದರು. ಈ ಪೋಸ್ಟ್​​​ಗಳು ವಿವಾದಕ್ಕೆ ಕಾರಣವಾಗಿ ಅನೇಕ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಲು ಇಂದು ಮುಂಜಾನೆ ಕೋಲ್ಹಾಪುರದ ಛತ್ರಪತಿ ಶಿವಾಜಿ ಮಹಾರಾಜ್ ಚೌಕ್‌ನಲ್ಲಿ ಜಮಾಯಿಸಿದ್ದರು.

ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಲಕ್ಷ್ಮೀಪುರಿ ಠಾಣೆಯೆದುರು ಗುಂಪು ಜಮಾಯಿಸಿತ್ತು. ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು.ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು ಎಂದು ವರದಿಯಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಿಳಿಸಿದ್ದಾರೆ. ಅಲ್ಲದೆ ಸಾರ್ವಜನಿಕರು ಶಾಂತಿ ಕಾಪಾಡುವಂತೆ ಮನವಿ ಮಾಡಿದರು.

ಈ ಕುರಿತು ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.ಸಧ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ, ಹೆಚ್ಚುವರಿ ಪೊಲೀಸ್‌ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಕೊಲ್ಲಾಪುರ ಕಲೆಕ್ಟರ್‌ ರಾಹುಲ್‌ ರೆಖಾವರ್‌ ಹೇಳಿದ್ದಾರೆ.

ಬುಧವಾರ ಮಧ್ಯಾಹ್ನದಿಂದ ಗುರುವಾರ ಸಂಜೆಯವರೆಗೆ ಅಥವಾ ಪರಿಸ್ಥಿತಿಗೆ ಅನುಗುಣವಾಗಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವ ಪ್ರಸ್ತಾವನೆಯನ್ನು ಅಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯ ಮೀಸಲು ಪೊಲೀಸ್ ಪಡೆ (ಎಸ್‌ಆರ್‌ಪಿಎಫ್) ಸಿಬ್ಬಂದಿಯನ್ನು ನಗರದಲ್ಲಿ ನಿಯೋಜಿಸಲಾಗಿದ್ದು, ಪೊಲೀಸರು ಸತಾರಾದಿಂದ ಹೆಚ್ಚಿನ ಪೊಲೀಸರನ್ನು ಕರೆಸಿದ್ದಾರೆ ಎಂದು ಅವರು ಹೇಳಿದರು.

ಈ ಪ್ರದೇಶದಲ್ಲಿ ಜೂನ್ 19 ರವರೆಗೆ ಐದು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳ ಸಭೆಯನ್ನು ನಿಷೇಧಿಸಿ ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದು ಅವರು ಹೇಳಿದರು.

ಟಾಪ್ ನ್ಯೂಸ್