ಉಳ್ಳಾಲ:ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ಖಾಸಗಿ ಬಸ್ಸು ಡಿಕ್ಕಿ ಹೊಡೆಯುವುದು ಕೂದಲೆಳೆ ಅಂತರದಲ್ಲಿ ತಪ್ಪಿತ್ತು.ಈ ಕುರಿತ ವಿಡಿಯೋ ಭಾರೀ ವೈರಲ್ ಆಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಇದೀಗ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಬಸ್ಸಿನ ಚಾಲಕ ಕೈರಂಗಳ ನಿವಾಸಿ ತ್ಯಾಗರಾಜ್ ವಿರುದ್ದ ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಚಾಲಕ ದುಡುಕುತನ ಹಾಗು ನಿರ್ಲಕ್ಷತನದಿಂದ, ಕರ್ಕಶ ಹಾರ್ನ್ ಹಾಕುತ್ತಾ ಬಸ್ಸನ್ನು ಚಲಾಯಿಸಿಕೊಂಡು ಬರುತ್ತಿದ್ದರು ಎಂದು ಪ್ರಕರಣ ದಾಖಲಾಗಿದೆ.
ಜೂ.20ರಂದು ಮುಡಿಪುನಿಂದ ತೌಡುಗೋಳಿ ಮಾರ್ಗವಾಗಿ ಮಂಗಳೂರು ಕಡೆಗೆ ಬಸ್ ತೆರಳುವಾಗ ಮಹಿಳೆಯೋರ್ವರು ರಸ್ತೆಯಲ್ಲಿ ಬರುವ ವಾಹನಗಳನ್ನು ಗಮನಿಸದೆ ರಸ್ತೆ ದಾಟಿದ್ದಾರೆ.ಈ ವೇಳೆ ಎದುರಿನಿಂದ ಬಸ್ ಬಂದಿದೆ.ಮಹಿಳೆ ರಸ್ತೆ ದಾಟುವುದನ್ನು ಗಮನಿಸಿದ ಬಸ್ ಡ್ರೈವರ್ ಬಸ್ ನ್ನು ಎಡಕ್ಕೆ ಸರಿಸಿ ಕೂದಲೆಳೆ ಅಂತರದಲ್ಲಿ ಮಹಿಳೆಯನ್ನು ರಕ್ಷಿಸಿದ್ದಾರೆ.
ಚಾಲಕನ ಸಮಯಪ್ರಜ್ಞೆಯಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬಳಿಕ ಎಲ್ಲರೂ ಮಹಿಳೆಯ ಆರೋಗ್ಯ ವಿಚಾರಿಸಿ ಕಳುಹಿಸಿ ಕೊಟ್ಟಿದ್ದಾರೆ.ಚಾಲಕನ ಸಮಯಪ್ರಜ್ಞೆಗೆ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗಿತ್ತು.
ಪಾದಚಾರಿ ಮಹಿಳೆ ಬಸ್ ಅಪಘಾತದಿಂದ ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆಯ ವಿಡಿಯೋ ಭಾರೀ ವೈರಲ್ ಆಗಿತ್ತು.ಇದರ ಬೆನ್ನಲ್ಲೇ ವಿಡಿಯೋ ಪರಿಶೀಲಿಸಿ ಪೊಲೀಸರು ಕ್ರಮವನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ.