ನವದೆಹಲಿ:ಮಾಜಿ ಸಂಸದ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರ ಹತ್ಯೆ ವಿಚಾರದಲ್ಲಿ ಯೋಗಿ ಸರಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಇದರ ಜೊತೆಗೆ ಯೋಗಿ ಸರಕಾರದಲ್ಲಿ 2017ರಿಂದ ನಡೆದ 183 “ಪೊಲೀಸ್ ಎನ್‌ಕೌಂಟರ್‌ಗಳ” ಸ್ಥಿತಿಗತಿ ವರದಿಯನ್ನು ರಾಜ್ಯ ಸರ್ಕಾರದಿಂದ ಸುಪ್ರೀಂ ಕೋರ್ಟ್ ಕೇಳಿದೆ.
ರಾಜ್ಯ ಪೊಲೀಸರ ಪ್ರಕಾರ,ಯೋಗಿ ಆದಿತ್ಯನಾಥ್ ಸರ್ಕಾರವು ಮಾರ್ಚ್ 2017ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಪೊಲೀಸ್ ಎನ್‌ಕೌಂಟರ್‌ಗಳಲ್ಲಿ 183 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಮತ್ತು ಅರವಿಂದ್ ಕುಮಾರ್ ಅವರ ಪೀಠವು ಶುಕ್ರವಾರ ಈ ಎನ್‌ಕೌಂಟರ್‌ಗಳ ವಿವರಗಳು, ತನಿಖೆಯ ಸ್ಥಿತಿ, ಸಲ್ಲಿಸಿದ ಚಾರ್ಜ್ ಶೀಟ್‌ಗಳು ಮತ್ತು ವಿಚಾರಣೆಯ ಸ್ಥಿತಿಯ ವಿವರಗಳನ್ನು ಆರು ವಾರಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ಯುಪಿ ಸರ್ಕಾರಕ್ಕೆ ಸೂಚಿಸಿದೆ.
5 ರಿಂದ 10 ಮಂದಿ ಆತನಿಗೆ ಕಾವಲು ಕಾಯುತ್ತಿದ್ದರು. ಯಾರೋ ಸುಮ್ಮನೆ ಬಂದು ಗುಂಡು ಹಾರಿಸುವುದು ಹೇಗೆ? ಇದು ಹೇಗೆ ನಡೆಯುತ್ತದೆ? ಯಾರೋ ಶಾಮೀಲಾಗಿದ್ದಾರೆ, ಎಂದು ಪೀಠ ಉಲ್ಲೇಖಿಸಿದೆ.
ಗ್ಯಾಂಗ್ ಸ್ಟರ್-ರಾಜಕಾರಣಿ ಅಹ್ಮದ್ ಅವರ ಸಹೋದರಿ ಆಯಿಷಾ ನೂರಿ ತನ್ನ ಸಹೋದರರ ಹತ್ಯೆಯ ಸಮಗ್ರ ತನಿಖೆಗೆ ನಿರ್ದೇಶನವನ್ನು ಕೋರಿ ಮಾಡಿದ ಮನವಿಯ ಮೇರೆಗೆ ಯುಪಿ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಅತೀಕ್ ಮತ್ತು ಅಶ್ರಫ್ ಅವರನ್ನು ಏಪ್ರಿಲ್ 15 ರಂದು ಪರೀಕ್ಷೆಗಾಗಿ ವೈದ್ಯಕೀಯ ಕಾಲೇಜಿಗೆ ಪೊಲೀಸ್ ಸಿಬ್ಬಂದಿ ಕರೆದೊಯ್ಯುತ್ತಿದ್ದಾಗ ಮಾಧ್ಯಮಗಳ ಎದುರೇ ಪತ್ರಕರ್ತರಂತೆ ನಟಿಸಿದ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.