ಮಗುವಿನ ಕೊಲೆ ಕೇಸ್; ಸುಚನಾ ಸೇಠ್ ತಂಗಿದ್ದ ಹೊಟೇಲ್ ನಲ್ಲಿ ಕೆಮ್ಮಿನ ಸಿರಫ್ ಬಾಟಲಿಗಳು ಪತ್ತೆ

ಗೋವಾದ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ ಸ್ಟಾರ್ಟ್‌ಅಪ್‌ನ ಸಿಇಒ ಸುಚನಾ ಸೇಠ್ ನಿನ್ನೆ ಬ್ಯಾಗ್‌ನಲ್ಲಿ ಮಗನ ಮೃತದೇಹವನ್ನು ಕಾರಿನಲ್ಲಿ ಬೆಂಗಳೂರಿಗೆ ಸಾಗಿಸುತ್ತಿದ್ದಾಗ ಪೊಲೀಸರು ಆಕೆಯನ್ನು ಬಂಧಿಸಿದ್ದರು.

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಕೃತ್ಯ ನಡೆದಿದೆ ಎನ್ನಲಾದ ಕೊಠಡಿಯಲ್ಲಿ ಕೆಮ್ಮಿನ ಸಿರಪ್‌ನ ಎರಡು ಖಾಲಿ ಬಾಟಲಿಗಳು ಸಿಕ್ಕಿದೆ. ಮಗುವಿಗೆ ಓವರ್‌ ಡೋಸ್‌ ಕೊಟ್ಟು ಕೊಲೆ ಮಾಡಿರುವ ಶಂಕೆ ಇದ್ದು ಇದೊಂದು ಪೂರ್ವಯೋಜಿತ ಕೃತ್ಯದಂತೆ ತೋರುತ್ತಿದೆ ಎಂದು ಪೊಲೀಸ್‌ ಅಧಿಕಾರಿಯೋರ್ವರು ಹೇಳಿದ್ದಾರೆ.

ಸುಚನಾ ಸೇಠ್ ಬಂಧನದ ನಂತರ ಮಂಗಳವಾರ ಆಕೆಯನ್ನು ಗೋವಾದ ಮಾಪುಸಾ ಪಟ್ಟಣದ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಆಕೆಗೆ ಕೋರ್ಟ್ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಯನ್ನು ವಿಧಿಸಿದೆ.

ಮರಣೋತ್ತರ ಪರೀಕ್ಷೆಯಲ್ಲಿ ಮಗುವನ್ನು ಬಟ್ಟೆ ಅಥವಾ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವ ಬಗ್ಗೆ ಮಾಹಿತಿ ಇದೆ. ಆದರೆ ಮಗು ನರಲಾಟ ಮಾಡಿರುವ ಲಕ್ಷಣ ಕಂಡು ಬಂದಿಲ್ಲ. ಮಗುವನ್ನು ಕೊಲೆ ಮಾಡುವ ಮೊದಲು ಅದಕ್ಕೆ ಓವರ್‌ ಡೋಸ್‌ ನೀಡಿರುವ ಸಾಧ್ಯತೆ ಇದೆ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಅಪಾರ್ಟ್‌ಮೆಂಟ್ ಸಿಬ್ಬಂದಿಯನ್ನು ವಿಚಾರಣೆ ನಡೆಸಿದಾಗ ಮಹಿಳೆ ತನಗೆ ಕೆಮ್ಮು ಇದೆ ಎಂದು ಹೇಳಿಕೊಂಡು ಕೆಮ್ಮಿನ ಸಿರಪ್‌ನ ಸಣ್ಣ ಬಾಟಲಿಯನ್ನು ತರುವಂತೆ ಹೇಳಿದ್ದಳು. ಆದರೆ ದೊಡ್ಡ ಬಾಟಲಿಯನ್ನು ಅವಳೇ ಕೊಂಡೊಯ್ದಿರಬಹುದು ಎಂದು ಹೇಳಿದ್ದಾರೆ. ಇದನ್ನು ಗಮನಿಸಿದಾಗ ಪೂರ್ವ ನಿಯೋಜಿತ ಕೃತ್ಯದಂತೆ ತೋರುತ್ತದೆ ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

ಆರೋಪಿತ ಸುಚನಾ ಸೇಠ್ ವಿಚಾರಣೆಯ ಸಮಯದಲ್ಲಿ ತಾನು ಕೊಲೆ ಮಾಡಿರುವುದನ್ನು ನಿರಾಕರಿಸಿದ್ದು, ಮಗು ನಿದ್ರೆಯಿಂದ ಎದ್ದಾಗ ಮೃತಪಟ್ಟಿತ್ತು ಎಂದು ಹೇಳಿದ್ದಾಳೆ. ನಾವು ಅವಳ ವಾದವನ್ನು ಒಪ್ಪುವುದಿಲ್ಲ. ಈ ಕುರಿತ ಹೆಚ್ಚಿನ ತನಿಖೆಯು ಮಗುವಿನ ಕೊಲೆಯ ಹಿಂದಿನ ಉದ್ದೇಶವನ್ನು ಬಹಿರಂಗಪಡಿಸುತ್ತದೆ. ಆರೋಪಿ ಮಹಿಳೆ ಮತ್ತು ಅವಳ ಪತಿ ದೂರವಾಗಿದ್ದರು. ಅದಕ್ಕಾಗಿಯೇ ಅವಳು ಇದನ್ನು ಮಾಡಿರಬಹುದು ಎಂದು ನಮಗೆ ತೋರುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಗುವನ್ನು ಕತ್ತು ಹಿಸುಕಿ ಅಥವಾ ಅದನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಬಟ್ಟೆ ಅಥವಾ ದಿಂಬನ್ನು ಬಳಸಲಾಗಿದೆ. ಮಗುವನ್ನು ಕೈಯಿಂದ ಕತ್ತು ಹಿಸುಕಿದಂತೆ ಕಾಣುತ್ತಿಲ್ಲ. ಇದು ದಿಂಬು ಅಥವಾ ಇತರ ವಸ್ತುವಿನಂತೆ ಕಾಣುತ್ತದೆ ಎಂದು ಹಿರಿಯೂರು ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಕುಮಾರ್ ನಾಯ್ಕ್ ಸುದ್ದಿಗಾರರಿಗೆ ತಿಳಿಸಿದ್ದರು.

ಸುಚನಾ ಸೇಠ್ ಜನವರಿ 6 ರಂದು ತನ್ನ ಮಗನೊಂದಿಗೆ ಉತ್ತರ ಗೋವಾದ ಸಿಂಕ್ವೆರಿಮ್‌ನಲ್ಲಿರುವ ಹೋಟೆಲ್‌ಗೆ ತೆರಳಿದ್ದರು (ಚೆಕ್‌ ಇನ್ ಮಾಡಿದ್ದರು). ಆದರೆ ಆಕೆ ವಾಪಸ್‌ ಬರುವಾಗ (ಚೆಕ್‌ ಔಟ್ ಮಾಡುವಾಗ) ಒಬ್ಬರೇ ಬಂದಿದ್ದರು. ಇದರಿಂದ ಹೋಟೆಲ್‌ ಸಿಬ್ಬಂದಿಗೆ ಅನುಮಾನ ಕಾಡಿತ್ತು.

ಸುಚನಾ ಹೋಟೆಲ್ ತೊರೆದ ಬಳಿಕ, ಅಲ್ಲಿನ ನೌಕರರು ಕೊಠಡಿ ಸ್ವಚ್ಚಗೊಳಿಸಲು ತೆರಳಿದ್ದರು. ಈ ವೇಳೆ ಕೊಠಡಿಯಲ್ಲಿ ರಕ್ತದ ಕಲೆಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು.

ಬಳಿಕ ಪೊಲೀಸರು ಸುಚನಾರನ್ನು ಕರೆದುಕೊಂಡು ಬಂದಿದ್ದ ಕಾರು ಚಾಲಕನನ್ನು ಸಂಪರ್ಕಿಸಿ ಮಹಿಳೆಯಲ್ಲಿ ಮಗುವಿನ ಕುರಿತು ವಿಚಾರಿಸಿದ್ದರು. ಚಾಲಕ ವಿಚಾರಿಸಿದಾಗ, ಮಗ ಗೆಳತಿಯೊಂದಿಗೆ ತೆರಳಿದ್ದಾಗಿ ಆಕೆ ಸುಳ್ಳು ಹೇಳಿದ್ದರು. ಪೊಲೀಸರು ಮತ್ತೆ ಕಾರು ಚಾಲಕನಿಗೆ ಕರೆ ಮಾಡಿ ಸುಚನಾ ಅವರಿಗೆ ಕೊಂಕಣಿ ತಿಳಿದಿಲ್ಲದೆ ಇರುವುದರಿಂದ ಕೊಂಕಣಿಯಲ್ಲಿ ಮಾತನಾಡಿ ಕಾರನ್ನು ಹತ್ತಿರದ ಚಿತ್ರದುರ್ಗದ ಐಮಂಗಲ ಠಾಣೆಗೆ ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದರು. ಕಾರು ಚಾಲಕ ಹಾಗೆಯೆ ಮಾಡಿದ್ದ. ನಂತರ ಪೊಲೀಸರು ಆಕೆಯನ್ನು ಬಂಧಿಸಿದಾಗ ಆಕೆಯ ಜೊತೆಗಿನ ಬ್ಯಾಗಿನಲ್ಲಿ ಮಗನ ಮೃತದೇಹ ಪತ್ತೆಯಾಗಿತ್ತು.

ಟಾಪ್ ನ್ಯೂಸ್