ಕಾಸರಗೋಡು;ಕಾಲೇಜು ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ಬಸ್ ನಿರ್ವಾಹಕನೋರ್ವನನ್ನು ಬೇಡಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕುತ್ತಿಕೋಲ್ ಉಮೇಶ್ ಕುಮಾರ್ (30) ಬಂಧಿತ. ಬಂದಡ್ಕ ಸರಕಾರಿ ಶಾಲೆಯ ಪ್ಲಸ್ 2 ವಿದ್ಯಾರ್ಥಿನಿ ಮಾಲಕುಂಡುವಿನ ಶರಣ್ಯ(17)ಆತ್ಮಹತ್ಯೆಗೆ ಸಂಬಂಧ ಪಟ್ಟಂತೆ ಈತನನ್ನು ಬಂಧಿಸಲಾಗಿದೆ.
ಮಾರ್ಚ್ 20ರಂದು ಸಂಜೆ ಶರಣ್ಯ ಮನೆಯ ಕೋಣೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.ಈಕೆ ಬರೆದಿಟ್ಟಿದ್ದ ಆತ್ಮಹತ್ಯೆ ಪತ್ರವು ಶರಣ್ಯಳ ಕೋಣೆಯಿಂದ ಲಭಿಸಿತ್ತು.ಆತ್ಮಹತ್ಯೆ ಬಗ್ಗೆ ಮನೆಯವರು ಸಂಶಯ ವ್ಯಕ್ತಪಡಿಸಿದ್ದರು.ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.
ಈ ಕುರಿತು ಮಾಹಿತಿ ಕಲೆ ಹಾಕಿದ ಪೊಲೀಸರು ತನಿಖೆ ನಡೆಸಿದ್ದರು.ಸೈಬರ್ ಸೆಲ್ ನ ನೆರವಿನಿಂದ ತನಿಖೆ ನಡೆಸಿದ ಪೊಲೀಸರು ಆತ್ಮಹತ್ಯೆಗೆ ಪ್ರೇರಣೆಯಾದ ಉಮೇಶ್ ಕುಮಾರ್ ನನ್ನು ಬಂಧಿಸಿದ್ದಾರೆ.