ಬಾಗಲಕೋಟೆ;ವೈದ್ಯರು ಶಸ್ತ್ರಕ್ರಿಯೆ ನಡೆಸಿ ಬರೋಬ್ಬರಿ 187 ನಾಣ್ಯಗಳನ್ನು ವ್ಯಕ್ತಿಯೋರ್ವನ ಹೊಟ್ಟೆಯಿಂದ ಹೊರ ತೆಗದು ವ್ಯಕ್ತಿಯ ಜೀವ ಉಳಿಸಿದ್ದಾರೆ.
ಹೊಟ್ಟೆ ನೋವಿನ ಹಿನ್ನೆಲೆ ರಾಯಚೂರು ಜಿಲ್ಲೆ ಲಿಂಗಸುಗೂರ ತಾಲೂಕಿನ ಸಂತೆ ಕೆಲ್ಲೂರ ಗ್ರಾಮದ 54 ವರ್ಷದ ದ್ಯಾಮಪ್ಪ ಹರಿಜನ ಎಂಬವರನ್ನು ಕುಮಾರೇಶ್ವರ ಆಸ್ಪತ್ರೆಗೆ ಕರೆತರಲಾಗಿತ್ತು.ವೈದ್ಯರು ಎಕ್ಸ್ ರೇ,ಸ್ಕ್ಯಾನಿಂಗ್ ನಡೆಸಿದಾಗ ನೂರಾರು ನಾಣ್ಯಗಳು ಹೊಟ್ಟೆಯಲ್ಲಿ ಪತ್ತೆಯಾಗಿದ್ದವು.
ತಕ್ಷಣ ಎಚ್ಚೆತ್ತ ವೈದ್ಯರು ಪ್ರಾಣಕ್ಕೆ ಅಪಾಯ ಇರುವುದನ್ನು ಗಮನಿಸಿ ದ್ಯಾಮಪ್ಪಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.ನುರಿತ ವೈದ್ಯರ ತಂಡ ಶಸ್ತ್ರಚಿಕಿತ್ಸೆಯನ್ನು ಮಾಡಿ ನಾಣ್ಯಗಳನ್ನು ಹೊರ ತೆಗೆದಿದ್ದಾರೆ.
ರೋಗಿಯ ಹೊಟ್ಟೆಯಲ್ಲಿ 5 ರೂ. ಮುಖಬೆಲೆಯ 56 ನಾಣ್ಯ,2ರೂ. ಮೌಲ್ಯದ 51 ನಾಣ್ಯ ಮತ್ತು 1 ರೂ. ಮುಖಬೆಲೆಯ 80 ನಾಣ್ಯ ಸೇರಿ ಒಟ್ಟು 187 ನಾಣ್ಯಗಳಿತ್ತು. ಆ ನಾಣ್ಯಗಳ ತೂಕ ಒಂದೂವರೆ ಕಿಲೋ ಇತ್ತು ಎಂದು ವೈದ್ಯರು ಹೇಳಿದ್ದಾರೆ.
ಶಸ್ತ್ರಚಿಕಿತ್ಸೆ ನಡೆಸಿದ ತಂಡದಲ್ಲಿ ಕುಮಾರೇಶ್ವರ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ತಜ್ಞ ಡಾ.ಈಶ್ವರ ಕಲಬುರ್ಗಿ ಮತ್ತು ಡಾ.ಪ್ರಕಾಶ ಕಟ್ಟಿಮನಿ, ಅರವಳಿಕೆ ತಜ್ಞರಾದ ಡಾ.ಅರ್ಚನಾ ಮತ್ತು ಡಾ.ರೂಪಾ ಹುಲಕುಂದೆ ಅವರು ಇದ್ದರು.