ಮಂಗಳೂರು;ಈ ಬಾರಿ ಮತ ಯಂತ್ರಗಳನ್ನು ಸಾಗಾಟ ಮತ್ತು ಭದ್ರತಾ ಕೊಠಡಿಯಲ್ಲಿ ಇರಿಸಿರುವಾಗ ಅದಕ್ಕೆ ಪಕ್ಷಗಳ ಅಭ್ಯರ್ಥಿ ಅಥವಾ ಅವರ ಪ್ರತಿನಿಧಿ ಮತಯಂತ್ರಗಳ ಕಾವಲಿಗೆ ಅವಕಾಶ ನೀಡಲಾಗಿದೆ.
ಎಲ್ಲಾ ಪಕ್ಷಗಳ ಅಭ್ಯರ್ಥಿ ಅಥವಾ ಅವರ ಪ್ರತಿನಿಧಿ ಮತಯಂತ್ರಗಳನ್ನು ಭದ್ರತಾ ಕೊಠಡಿಗೆ ತರುವ ವೇಳೆ ಕೇಂದ್ರೀಯ ಪೊಲೀಸ್ ಬಲದ ವಾಹನದ ಹಿಂದೆ ಪ್ರತ್ಯೇಕ ವಾಹನದಲ್ಲಿ ಬರಬಹುದು.ಅಷ್ಟೇ ಅಲ್ಲ ಸ್ಟ್ರಾಂಗ್ ರೂಂನಲ್ಲಿ ಇರಿಸಿದ ಬಳಿಕ ಅಭ್ಯರ್ಥಿಗಳು/ ಅವರ ಏಜೆಂಟರು/ ಪ್ರತಿನಿಧಿಗಳು (ಯರಾದರೂ ಒಬ್ಬರು ಮಾತ್ರ) ಅದೇ ಕೇಂದ್ರದಲ್ಲಿ ಅವರಿಗೆ ನಿಗದಿ ಪಡಿಸಿದ ಕೊಠಡಿಯಲ್ಲಿ ಇರಬಹುದು.ಭದ್ರತಾ ಕೊಠಡಿಯ ಸಿಸಿಟಿವಿಯನ್ನು ಅವರಿಗೆ ನೇರವಾಗಿ ವೀಕ್ಷಿಸಲು ಈ ಬಾರಿ ಅವಕಾಶ ಇದೆ.
ಮತದಾನ ನಡೆದ ಬಳಿಕ ಮತ ಯಂತ್ರಗಳನ್ನು ಹಿಂದಕ್ಕೆ ತಂದು ಭದ್ರತಾ ಕೊಠಡಿಗಳಲ್ಲಿ ಇರಿಸಲಾಗುತ್ತದೆ. ಆ ಬಳಿಕ ಮತ ಎಣಿಕೆಯಂದು ಅವುಗಳನ್ನು ಹೊರತೆಗೆದು ಎಣಿಕೆ ಮಾಡಲಾಗುತ್ತದೆ.
ಡಿಮಸ್ಟರಿಂಗ್ ಕೇಂದ್ರಗಳಿಂದ ಭದ್ರತಾ ಕೊಠಡಿಗೆ ಮತಯಂತ್ರ ತರುವಾಗ ಹಾಗೂ ಭದ್ರತಾ ಕೊಠಡಿಗಳಲ್ಲಿ ಇರಿಸಿರುವಾಗ ಕೇವಲ ಕೇಂದ್ರೀಯ ಅರೆ ಮಿಲಿಟರಿ ಪೊಲೀಸ್ ಪಡೆ (ಸಿಪಿಎಂಎಫ್) ಭದ್ರತೆ ಕೊಡುವುದು ಸಹಜ.
ಚುನಾವಣಾ ಆಯೋಗ ಈ ಬಾರಿ ಭದ್ರತೆ ನೀಡುವುದು ಹಾಗೂ ವೀಕ್ಷಣೆಗೆ ಅಭ್ಯರ್ಥಿಗಳಿಗೆ ಕೂಡ ಅವಕಾಶ ಮಾಡಿಕೊಟ್ಟಿದೆ.
ಚುನಾವಣೆಯಲ್ಲಿ ಮತದಾನ ನಡೆಸುವ ಮತದಾರರನ್ನು ವಾಹನಗಳ ಮೂಲಕ ಕರೆ ತರಲು ಯಾವುದೇ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷದವರಿಗೆ ಅವಕಾಶವಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಹೇಳಿದ್ದಾರೆ.
ಇನ್ನು ಮತದಾರರನ್ನು ವಾಹನಗಳಲ್ಲಿ ಕರೆ ತರಲು ಅವಕಾಶವಿಲ್ಲ. ಒಂದೊಮ್ಮೆ ಇಂತಹ ಸುದ್ದಿಗಳು ಬಂದಲ್ಲಿ ಸಮರ್ಪಕ ಪರಿಶೀಲನೆ ನಡೆಸಲಾಗುವುದು ಹಾಗೂ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಸುದ್ಧಿಗೋಷ್ಠಿಯಲ್ಲಿ ದ.ಕ.ಜಿಲ್ಲಾಧಿಕಾರಿ ಡಾ. ರವಿಕುಮಾರ್ ಹೇಳಿದ್ದಾರೆ.
ಇನ್ನು ಮತಗಟ್ಟೆಯೊಳಗೆ ಓರ್ವ ಅಧಿಕಾರಿಗೆ ಮಾತ್ರ ಮೊಬೈಲ್ ಕೊಂಡೊಯ್ಯಲು ಅವಕಾಶವಿದೆ. ಉಳಿದಂತೆ ಯಾವುದೇ ಅಧಿಕಾರಿಗೆ ಮೊಬೈಲ್ ಕೊಂಡೊಯ್ಯಲು ಅವಕಾಶವಿಲ್ಲ.
ಮತದಾರರೂ ಕೂಡ ಕೇಂದ್ರದೊಳಗೆ ಮೊಬೈಲ್ ಕೊಂಡೊಯ್ಯುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನು ಮತದಾರರ ಮೊಬೈಲ್, ಟ್ಯಾಬ್, ಲ್ಯಾಪ್ ಟಾಪ್ ಸೇರಿದಂತೆ ಯಾವುದೇ ವಸ್ತುಗಳನ್ನು ಒಳಗೆಡೆ ಕೊಂಡೊಯ್ಯಲು ಅನುಮತಿ ಇಲ್ಲ ಜಿಲ್ಲಾಧಿಕರಿ ರವಿ ಕುಮಾರ್ ಹೇಳಿದ್ದಾರೆ.