ಬೆಂಗಳೂರು;2023ನೇ ಸಾಲಿನ ಬಜೆಟ್ ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ್ದು,3,03,910 ಕೋಟಿ ಮೊತ್ತದ ಬಜೆಟ್ ಮಂಡನೆ ಮಾಡಿದ್ದಾರೆ.
ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆ ನಡೆದಿದೆ ಎನ್ನಲಾಗಿದೆ.ರೈತರನ್ನು ಓಲೈಸಿಕೊಳ್ಳಲು ಶೂನ್ಯ ಬಡ್ಡಿ ಸಾಲದ ಮೊತ್ತವನ್ನು 3ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ 300 ಹೈಟೆಕ್ ಹಾರ್ವೆಸ್ಟರ್ ನೀಡಲು ಯೋಜನೆ, ಕಿರುಧಾನ್ಯಗಳ ವಿಸ್ತೀರ್ಣ, ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ರೈತಸಿರಿ ಯೋಜನೆಯಡಿ ಕಿರುಧಾನ್ಯ ಬೆಳೆಗಾರರಿಗೆ ಪ್ರತಿ 10,000 ಗಳ ಪ್ರೋತ್ಸಾಹ, ಸಹಸ್ರ ಸರೋವರ ಕಾರ್ಯಕ್ರಮದಡಿ ರಾಜ್ಯದಲ್ಲಿ 1,000 ಸಣ್ಣ ಸರೋವರಗಳನ್ನು ಅಭಿವೃದ್ಧಿ, 12 ತೋಟಗಳಲ್ಲಿ ಒಂದು ತೋಟ ಒಂದು ಬೆಳೆ ಯೋಜನೆಯಡಿ ತೋಟಗಾರಿಕೆ ಉತ್ಪಾದಕತೆಯನ್ನು ಹೆಚ್ಚಿಸಲು 10 ಕೋಟಿ ರೂ. ಗಳ ಒಂದು ಬಾರಿಯ ವಿಶೇಷ ಅನುದಾನ ನೀಡಲಾಗಿದೆ.
ಶಾಲಾ ವಿದ್ಯಾರ್ಥಿನಿಯರಿಗೆ ಹಾಗೂ ಕೆಲಸಕ್ಕೆ ತೆರಳುವ ಮಹಿಳೆಯರಿಗೆ ಅನುಕೂಲವಾಗುವ ರೀತಿಯಲ್ಲಿ ಉಚಿತ ಬಸ್ ಪಾಸ್ ಘೋಷಣೆ ಮಾಡಲಾಗಿದೆ.
ಮಹಿಳಾ ಕಾರ್ಮಿಕರಿಗೆ 500ರೂ. ಸಹಾಯಧನ, 50 ಲಕ್ಷ ಮಹಿಳೆಯರಿಗೆ ಉಚಿತ ಬಸ್ ಪಾಸ್, ಮಕ್ಕಳ ಬಸ್ ಯೋಜನೆ ಮೂಲಕ 100 ಕೋಟಿ ವೆಚ್ಚದಲ್ಲಿ ಬಸ್ ಪಾಸ್ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.
ಅಡಿಕೆ ಬೆಳೆಯನ್ನು ಬಾಸುವ ರೋಗಗಳ ನಿರ್ವಹಣೆಗೆ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿ, ಉತ್ಪಾದಕತೆ ಹೆಚ್ಚಿಸಲು ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಕ್ಕೆ 10 ಕೋಟಿ ರೂ. ಗಳ ನೆರವು ನೀಡಲಾಗಿದೆ.
ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ತೋಟಗಾರಿಕಾ ಮಹಾವಿದ್ಯಾಲಯ ಸ್ಥಾಪನೆ, ದ್ರಾಕ್ಷಿ ಬೆಳೆಗಾರರಿಗೆ ಕರ್ನಾಟಕ ದಾಕ್ಷಿ ಹಾಗೂ ದ್ರಾಕ್ಷಾರಸ ಮಂಡಳಿ ಮುಖಾಂತರ 100 ಕೋಟಿ ರೂ. ಗಳ ವೆಚ್ಚದಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ.
ಶಿಡ್ಲಘಟ್ಟದಲ್ಲಿ ನಬಾರ್ಡ್ ಯೋಜನೆಯಡಿ 75 ಕೋಟಿ ರೂ.ಗಳ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ, ಗುಣಮಟ್ಟದ ಕಚ್ಚಾ ರೇಷ್ಮೆ ಉತ್ಪಾದನೆಗೆ 32 ಸ್ವಯಂಚಾಲಿತ ರೀಲಿಂಗ್ ಘಟಕಗಳ ಸ್ಥಾಪನೆಗೆ 10 ಕೋಟಿ ರೂ. ಹಾಗೂ 1,000 ರೇಷ್ಮೆ ಬೆಳೆಗಾರರಿಗೆ ಬ್ರೆಡ್ಡರ್ಸ್ ಗಳನ್ನು ಒದಗಿಸಲು 12 ಕೋಟಿ ರೂ. ನೆರವು ಒದಗಿಸಲಾಗಿದೆ
ಗೋ ಸಂಪತ್ತಿನ ರಕ್ಷಣೆಗಾಗಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ, ಗೋಶಾಲೆಗಳ ಸ್ಥಾಪನೆ, ಪುಣ್ಯಕೋಟಿ ದತ್ತು ಯೋಜನೆಯ ಅನುಷ್ಠಾನ ಹಾಗೂ 290 ಸಂಚಾರಿ ಪಶುಚಿಕಿತ್ಸಾಲಯಗಳ ಪ್ರಾರಂಭ ಮಾಡುವುದಾಗಿ ಸಿಎಂ ಘೋಷಿಸಿದ್ದಾರೆ.
ರಾಜ್ಯದಲ್ಲಿ 40,000 ಕ್ಕಿಂತಲೂ ಹೆಚ್ಚು ವಕ್ಫ್ ಆಸ್ತಿಗಳಿದ್ದು, ಇವುಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ 2023-24 ನೇ ಸಾಲಿನಲ್ಲಿ 10 ಕೋಟಿ ರೂ. ಮತ್ತು ಖಬರಸ್ತಾನ್’ಗಳ ಅಭಿವೃದ್ಧಿಗಾಗಿ 10 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು ಎಂದು ಸಿಎಂ ಹೇಳಿದರು.
ಅಲ್ಪಸಂಖ್ಯಾತರಲ್ಲಿ ಅತೀ ಹಿಂದುಳಿದ ಪಿಂಜಾರ, ದರ್ವೇಸು ಮತ್ತು ನದಾಫ್ ಸಮುದಾಯಗಳ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಎಲ್ಲಾ ಯೋಜನೆಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು.