ಬೆಂಗಳೂರು;ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅವಿದ್ಯಾವಂತರು ಹೆಚ್ಚಾಗಿ ಮತಹಾಕಿದ್ದಾರೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆಯೊಂದನ್ನು ಉಲ್ಲೇಖಿಸಿ ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮಾಡಿದ್ದು ಭಾರೀ ಟೀಕೆಗೆ ಕಾರಣವಾಗಿದೆ.
ಇಂಡಿಯಾ ಟುಡೆ ಚುನಾವಣೋತ್ತರ ಸಮೀಕ್ಷೆ ನಡೆಸಿದ್ದು ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ.
ಕಾಂಗ್ರೆಸ್ 122 ರಿಂದ 140 ಸ್ಥಾನಗಳಲ್ಲಿ ಪಡೆಯಲಿದ್ದು, ಬಿಜೆಪಿ 62-80 ಸೀಟುಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಮತದಾರರ ಶೈಕ್ಷಣಿಕ ಅರ್ಹತೆ ಬಗ್ಗೆಯೂ ಸಮೀಕ್ಷೆಯಲ್ಲಿ ವಿವರ ನೀಡಲಾಗಿದೆ.ಶಾಲೆಗೆ ತೆರಳದವರಲ್ಲಿ ಒಟ್ಟು ಮತದಾರರಲ್ಲಿ ಶೇಕಡಾ 52 ರಷ್ಟು ಮಂದಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂದು ಹೇಳಿದೆ.ಉನ್ನತ ಶಿಕ್ಷಣ ಪಡೆದವರಲ್ಲಿ ಶೇ.41 ರಷ್ಟು ಮಂದಿ ಬಿಜೆಪಿಗೆ ಮತ ಹಾಕಿದ್ದು, ಶೇ.29ರಷ್ಟು ಮಂದಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಜೆಡಿಎಸ್‌ಗೆ ಶೇ.23 ಮಂದಿ ಮತಹಾಕಿದ್ದಾರೆ ಎಂದು ಹೇಳಿದೆ.
ಸಮೀಕ್ಷೆಯ ಫೋಟೋವನ್ನು ಹಂಚಿಕೊಂಡಿರುವ ಚಕ್ರವರ್ತಿ ಸೂಲಿಬೆಲೆ ಅನಕ್ಷರಸ್ಥರು ಹೆಚ್ಚಾಗಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಸೂಲಿಬೆಲೆ ಟ್ವೀಟ್ ಗೆ ಜನ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ವಿಧ್ಯಾಭ್ಯಾಸವನ್ನು ಉಲ್ಲೇಖಿಸಿದ ಕೆಲವರು, ನೀವು ಹೇಳೋ ಪ್ರಕಾರ ಮೋದಿ ಅವರು ಕೂಡ ಕಾಂಗ್ರೆಸ್ ಗೆ ವೋಟ್ ಹಾಕಿದ್ದಾರೆ ಅಂತಾನಾ? ಎಂದು ಪ್ರಶ್ನಿಸಿದ್ದಾರೆ.
ಇನ್ನೋರ್ವರು ಹೌದು, ಅನಕ್ಷರಸ್ಥರಿಗೆ ಮತದಾನ ಮಾಡುವ ಜವಾಬ್ದಾರಿ ಇದೆ, ಆದರೆ ಬೆಂಗಳೂರಿನ ಅಕ್ಷರಸ್ಥರು ಮತದಾನದ ದಿನ ಏನು ಮಾಡುತ್ತಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ.