ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಗಾಯಕ ಅರೆಸ್ಟ್
ಹರ್ಯಾಣ;ಹೊಟೇಲ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಭೋಜ್‌ಪುರಿ ಗಾಯಕನನ್ನು ಹರಿಯಾಣದ ಗುರುಗ್ರಾಮ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಬಿಹಾರ ಮೂಲದ ಅಭಿಷೇಕ್ ಎಂದು ಗುರುತಿಸಲಾಗಿದ್ದು, ಅಪ್ರಾಪ್ತ ಬಾಲಕಿಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
21 ವರ್ಷದ ಅಭಿಷೇಕ್, ಬಾಬುಲ್ ಬಿಹಾರಿ ಎಂಬ ಹೆಸರಿನಿಂದ ಪ್ರಸಿದ್ದಿ ಪಡೆದಿದ್ದಾರೆ.ಅವರ ಯೂಟ್ಯೂಬ್ ಚಾನೆಲ್‌ನಲ್ಲಿ 27,000 ಕ್ಕೂ ಹೆಚ್ಚು ಅನುಯಾಯಿಗಳೊಂದಿಗೆ ಸುಮಾರು 600 ವೀಡಿಯೊಗಳನ್ನು ಹೊಂದಿದ್ದಾರೆ.
ಅವರ ‘ಅಧಿಕೃತ’ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾದ ಮತ್ತೊಂದು ಯೂಟ್ಯೂಬ್ ಚಾನೆಲ್ ಅನ್ನು ಕಾನೂನು ಉಲ್ಲಂಘನೆಗಳಿಗಾಗಿ ಅಳಿಸಲಾಗಿದೆ ಎಂದು ಕೂಡ ವರದಿಯಾಗಿದೆ.
ಪೊಲೀಸರ ಪ್ರಕಾರ, ಆರೋಪಿಯು ಎರಡು ವರ್ಷಗಳ ಹಿಂದೆ ರಾಜೀವ್ ನಗರ ಪ್ರದೇಶದಲ್ಲಿ ವಾಸವಾಗಿದ್ದ 13 ವರ್ಷದ ಬಾಲಕಿಗೆ ಆಮಿಷ ಒಡ್ಡಿದ್ದ. ಆಕೆಯೊಂದಿಗೆ ಸ್ನೇಹ ಬೆಳೆಸಿದ ಬಳಿಕ ಆಕೆಯನ್ನು ಹೋಟೆಲ್ ರೂಮಿಗೆ ಕರೆದೊಯ್ದು ಅತ್ಯಾಚಾರವೆಸಗಿ ಆಕೆಯ ಚಿತ್ರಗಳನ್ನು ತೆಗೆದಿದ್ದಾನೆ.
ಘಟನೆಯ ನಂತರ ಅಪ್ರಾಪ್ತ ಬಾಲಕಿ ಆರೋಪಿಯಿಂದ ದೂರ ಉಳಿದಿದ್ದು, ಆತನ ಬಗ್ಗೆ ಯಾರಿಗೂ ಹೇಳಿರಲಿಲ್ಲ.
ಆರೋಪಿಯು ಕೆಲವು ದಿನಗಳ ಹಿಂದೆ ಅಪ್ರಾಪ್ತ ಬಾಲಕಿಯ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆ ಚಿತ್ರಗಳನ್ನು ನೋಡಿದ ನಂತರ, ಸಂತ್ರಸ್ತೆಯ ಕುಟುಂಬದವರು ಬಾಲಕಿಯನ್ನು ಪ್ರಶ್ನಿಸಿದರು.ಈ ವೇಳೆ ವಿಚಾರ ಬಯಲಾಗಿದೆ.
ಸಂತ್ರಸ್ತೆಗೆ ಕೌನ್ಸಿಲಿಂಗ್ ಮಾಡಿದ ನಂತರ, ಆರೋಪಿಯ ವಿರುದ್ಧ ಸೆಕ್ಟರ್ 14 ಪೊಲೀಸ್ ಠಾಣೆಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ದೂರಿನ ಪ್ರಕಾರ ಎಫ್‌ಐಆರ್ ದಾಖಲಿಸಿ, ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರ ಸುಭಾಷ್ ಬೋಕನ್ ತಿಳಿಸಿದ್ದಾರೆ.
ಆತನನ್ನು ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಮತ್ತು ಇಂದು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.