ಸಿಂಗಾಪುರ:ಗಾಂಜಾ ಕಳ್ಳ ಸಾಗಾಣಿಕೆ ಮಾಡಲು ಸಂಚು ರೂಪಿಸಿದ ಹಿನ್ನೆಲೆ ಭಾರತೀಯ ಮೂಲದ ವ್ಯಕ್ತಿಯನ್ನು ಸಿಂಗಾಪುರದಲ್ಲಿ ಗಲ್ಲಿಗೇರಿಸಿರುವ ಬಗ್ಗೆ ವರದಿಯಾಗಿದೆ.
1 ಕೆಜಿ ತೂಕದಷ್ಟು ಗಾಂಜಾವನ್ನು ಕಳ್ಳಸಾಗಣೆ ಮಾಡಲು ಸಂಚು ರೂಪಿಸಿದ್ದ ಆರೋಪದ ಮೇಲೆ ಭಾರತ ಮೂಲದ ವ್ಯಕ್ತಿ ತಂಗರಾಜು ಸುಪ್ಪಯ್ಯನನ್ನು (46) ಸಿಂಗಾಪುರದ ಚಾಂಗಿ ಜೈಲು ಸಂಕೀರ್ಣದಲ್ಲಿ ಬುಧವಾರ ಗಲ್ಲಿಗೇರಿಸಲಾಗಿದೆ.
2017 ರಲ್ಲಿ ತಂಗರಾಜು 1,017.9 ಗ್ರಾಂ. ಗಾಂಜಾವನ್ನು ಕಳ್ಳಸಾಗಣೆ ಮಾಡುವ ಸಂಚಿನಲ್ಲಿ ತೊಡಗಿದ್ದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದ.
ಸಿಂಗಾಪುರದ ಕಾನೂನಿನ ಪ್ರಕಾರ ಗಲ್ಲುಶಿಕ್ಷೆಗೆ ಗುರಿಪಡಿಸಲು ಇರುವ ಪ್ರಮಾಣದ 2 ಪಟ್ಟು ಮಾದಕ ವಸ್ತು ಆತನ ಬಳಿ ಸಿಕ್ಕಿತ್ತು. 2018ರಲ್ಲಿ ಆತನಿಗೆ ಮರಣದಂಡನೆ ವಿಧಿಸಲಾಗಿತ್ತು. ಇದನ್ನು ಮೇಲ್ಮನವಿ ನ್ಯಾಯಾಲಯ ಕೂಡಾ ಬಳಿಕ ಎತ್ತಿ ಹಿಡಿದಿತ್ತು.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಸೇರಿದಂತೆ ಅಂತಾರಾಷ್ಟ್ರೀಯ ಸಂಸ್ಥೆಗಳು ತಂಗರಾಜುವಿನ ಗಲ್ಲುಶಿಕ್ಷೆಯನ್ನು ಮರುಪರಿಶೀಲನೆ ನಡೆಸುವಂತೆ ಸಿಂಗಾಪುರ ಸರ್ಕಾರವನ್ನು ಒತ್ತಾಯಿಸಿವೆ. ಆದರೆ ಇವಾವುದಕ್ಕೂ ಕಿವಿಗೊಡದ ಅಲ್ಲಿನ ಸರ್ಕಾರ ತಂಗರಾಜುನನ್ನು ಗಲ್ಲಿಗೇರಿಸಿದೆ ಎಂದು ವರದಿ ತಿಳಿಸಿದೆ.