ಪಿಎಸ್ ಐ ಮೇಲೆ ಶಾಸಕರ ಪುತ್ರನಿಂದ ಹಲ್ಲೆ ಆರೋಪ; ಕೇಸ್ ದಾಖಲು
ಸಿಂಧನೂರ:ರಂಗಮಂದಿರದ ಎದುರು ಪುನೀತ್ ರಾಜಕುಮಾರ್ ಪುತ್ಥಳಿ ಸ್ಥಾಪನೆಗೆ ಸಂಬಂಧಿಸಿದಂತೆ ಪೊಲೀಸರು ಮತ್ತು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಡುವೆ ನಡೆದ ತಳ್ಳಟದ ವೇಳೆ ಪಿಎಸ್ ಐ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಅವರ ಪುತ್ರ ಅಭಿಷೇಕ್ ನಾಡಗೌಡ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಸಿಂಧನೂರಿನಲ್ಲಿ ನೂತನವಾಗಿ ನಿರ್ಮಿಸಿದ ರಂಗ ಮಂದಿರದ ಮುಂದೆ ಚಿತ್ರನಟ ದಿವಂಗತ ಪುನಿತ್ ರಾಜಕುಮಾರ್ ಅವರ ಪ್ರತಿಮೆ ಸ್ಥಾಪಿಸಬೇಕು ಮತ್ತು ರಂಗ ಮಂದಿರಕ್ಕೆ ಅಪ್ಪು ಹೆಸರಿಡಬೇಕು ಎಂದು ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆಯನ್ನು ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಸೇರಿ ಇತರ ಅಧಿಕಾರಿಗಳು ಮತ್ತು ಪೊಲೀಸರು ತಡೆದಿದ್ದರು.ಈ ವೇಳೆ ವಾಗ್ವಾದ, ತಳ್ಳಾಟ ನಡೆದಿದೆ.
ಇದೇ ವೇಳೆ ಪಿಎಸ್ ಐ ಮಣಿಕಂಠ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.ಪಿಎಸ್‌ಐ ಮಣಿಕಂಠ ದೂರು ಆಧರಿಸಿ ಶಹರ ಪೊಲೀಸ್ ಠಾಣೆಯಲ್ಲಿ ಶಾಸಕರ ಪುತ್ರ ಅಭಿಷೇಕ ನಾಡಗೌಡ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಅಜಯ್ ದಾಸರಿ ಸೇರಿ 24 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.