ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುವುದಕ್ಕೆ ಕೇಂದ್ರದಿಂದ ಅಡ್ಡಿ? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಬೆಂಗಳೂರು:ʼಅನ್ನ ಭಾಗ್ಯʼ ಯೋಜನೆ ಅಡಿಯಲ್ಲಿ ಒಟ್ಟು 10 ಕೆಜಿ ಅಕ್ಕಿ ನೀಡುವುದಕ್ಕೆ ಕೇಂದ್ರ ಆಹಾರ ನಿಗಮ (FCI) ಅಕ್ಕಿ ಪೂರೈಕೆ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ನಗರದ ಶಕ್ತಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ನಾವು 5 ಗ್ಯಾರಂಟಿ ಘೋಷಿಸಿದ್ದೇವೆ. ಒಂದು ಗ್ಯಾರಂಟಿ ಘೋಷಿಸಿ ಜಾರಿಗೆ ತಂದಿದ್ದೇವೆ. ಬಡತನ ರೇಖೆಗಿಂತ ಕೆಳಗಿರುವವರಿಗೆ ಅನ್ನಭಾಗ್ಯ ನೀಡುವುದಾಗಿ ಹೇಳಿದ್ದೇವೆ.ಈಗ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಿದ್ದೇವೆ. 10 ಕೆಜಿ ಅಕ್ಕಿ ಕೊಡಲು ತೀರ್ಮಾನಿಸಿದ್ದೇವೆ.ಜುಲೈ 1 ರಿಂದ ಜಾರಿಗೆ ತರುತ್ತಿದ್ದೇವೆ ಎಂದು ಹೇಳಿದ್ದಾರೆ.

ಅನ್ನ ಭಾಗ್ಯದಡಿ ಬಡವರಿಗೆ ಅಕ್ಕಿ ನೀಡಲು ತಿಂಗಳಿಗೆ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು. ಹೆಚ್ಚುವರಿಯಾಗಿ 5 ಕೆಜಿ ಕೊಡಲು ಇಷ್ಟು ಬೇಕು. FCI ಜತೆ ಅಧಿಕಾರಿಗಳು ಚರ್ಚಿಸಿದ್ದಾರೆ ಪ್ರತೀ ತಿಂಗಳು ಅಕ್ಕಿ ನೀಡಲು ಸಮ್ಮತಿ ನೀಡಿದ್ದಾರೆ. ಪ್ರತೀ ತಿಂಗಳು ಕೊಡಲು ಡೆಪ್ಯುಟಿ ಜನರಲ್ ಮ್ಯಾನೇಜರ್ ಒಪ್ಪಿಕೊಂಡಿದ್ದಾರೆ. ಪ್ರತೀ ಕೆಜಿಗೆ 34ರೂ. ಸಾಗಾಣಿಕೆ ವೆಚ್ಚ 2.60 .ಒಟ್ಟು 36.60ರೂ.ಆಗುತ್ತದೆ.
ಸರಾಸರಿ 840 ಕೋಟಿ ರೂ ನಿಂದ 10092 ಕೋಟಿ ರೂ ಅಗತ್ಯವಿದೆ.

ಈ ಬಗ್ಗೆ FCI ಪ್ರಾದೇಶಿಕ ಕಚೇರಿಯಿಂದ ಪತ್ರ ಬಂದಿದೆ. 12 ರಂದು ಈ ಪತ್ರವನ್ನು ಕಳುಹಿಸಿದ್ದಾರೆ.13,819 ಮೆಟ್ರಿಕ್ ಟನ್ ಅಕ್ಕಿಯನ್ನು ಕೊಡುತ್ತೇವೆಂದು ಒಪ್ಪಿಗೆ ಪತ್ರ ಕೊಟ್ಟಿದ್ದಾರೆ. ಇದಾದ ಬಳಿಕ 13 ರಂದು ಮತ್ತೊಂದು ಪತ್ರ ಬರೆದು, ಗೋಧಿ ಮತ್ತು ಅಕ್ಕಿಯನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದ್ದಾರೆ‌ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಉತ್ತರ, ಪೂರ್ವ ರಾಜ್ಯಗಳಿಗೆ ಕೇಂದ್ರದ ಆಹಾರ ಧಾನ್ಯ ಪೂರೈಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ ಎಂದು ವಿವರಿಸಲಾಗಿದೆ.ಅನ್ನಭಾಗ್ಯ ಕಾರ್ಯಕ್ರಮವನ್ನು ಜಾರಿಗೊಳಿಸದೆ ಅಡ್ಡಿಪಡಿಸುವುದು ಇದರ ಹಿಂದಿನ ಉದ್ದೇಶ ಎಂದು ಸಿದ್ದರಾಮಯ್ಯ ದೂಷಿಸಿದರು.

ಆದರೂ ನಾವು ಅಕ್ಕಿ ಬೆಳೆಯುವ ರಾಜ್ಯಗಳಾದ ಪಂಜಾಬ್, ತೆಲಂಗಾಣ, ಆಂಧ್ರ, ಛತ್ತಿಸ್‍ಗಡ, ಹರಿಯಾಣದವರಿಗೆ ಈಗಾಗಲೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿದ್ದಾರೆ. ಜೂ.15ಕ್ಕೆ ಸಚಿವ ಕೆ.ಎಚ್.ಮುನಿಯಪ್ಪ ತೆಲಂಗಾಣ ಮುಖ್ಯಮಂತ್ರಿಯನ್ನು ಭೇಟಿಯಾಗಲಿದ್ದಾರೆ. ಅಂತೆಯೆ ಛತ್ತೀಸ್‍ಗಢದಿಂದಲೂ ಲಭ್ಯವಿರುವ ಅಕ್ಕಿಯ ಮಾಹಿತಿ ಪಡೆಯುತ್ತೇವೆ. ಒಟ್ಟಿನಲ್ಲಿ ಜನರಿಗೆ ಅನ್ನಭಾಗ್ಯ ದೊರೆಯುವಂತೆ ಮಾಡುವುದು ನಮ್ಮ ಗುರಿ ಎಂದು ಸಿದ್ದರಾಮಯ್ಯ ತಿಳಿಸಿದರು.

ಅಕ್ಕಿ ಇಟ್ಟುಕೊಂಡು ಕೊಡಲಾಗುವುದಿಲ್ಲ ಎನ್ನುವ ಕೇಂದ್ರ ಸರಕಾರವನ್ನು ಬಡವರ ವಿರೋಧಿಗಳು ಎನ್ನಬೇಕು. ಅವರು ಉಚಿತವಾಗಿ ಅಕ್ಕಿ ನೀಡುವುದಿಲ್ಲ. ನಾವು ಹಣ ನೀಡಿ ಪಡೆಯುವುದು. ಇತರರಿಗೆ ಕೊಡುವ ರೀತಿಯಲ್ಲಿ ನಮಗೂ ಕೊಡುತ್ತಿದ್ದರು.ಆದರೆ ಈಗ ಕರ್ನಾಟಕಕ್ಕೆ ನೀಡುವುದಿಲ್ಲ ಎನ್ನುವ ತೀರ್ಮಾನಕ್ಕೆ ಕೇಂದ್ರ ಬಂದಿದೆ. ಈಗಲೂ ನಾವು ಪ್ರಯತ್ನ ಮಾಡುತ್ತಿದ್ದೇವೆ.ಮತ್ತೆ ಕೇಂದ್ರಕ್ಕೆ ಮನವಿ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಟಾಪ್ ನ್ಯೂಸ್