ಅನ್ನಭಾಗ್ಯ ಯೋಜನೆಗೆ ಚಾಲನೆ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಭಾವುಕ ಟ್ವೀಟ್

ಬೆಂಗಳೂರು;ಅನ್ನಭಾಗ್ಯ ಯೋಜನೆಗೆ ಚಾಲನೆ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಭಾವುಕ ಟ್ವೀಟ್ ಮಾಡಿದ್ದಾರೆ.

ನನ್ನ ಬದುಕಿನಲ್ಲಿ ಅನುಭವಿಸಿದ ಹಸಿವು, ಬಡತನದ ಅನುಭವದಿಂದಲೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗಲೇ ‘ಅನ್ನಭಾಗ್ಯ’ ಯೋಜನೆಯನ್ನು ಜಾರಿಗೆ ತರುವ ನಿರ್ಧಾರ ಕೈಗೊಂಡಿದ್ದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ

ವಿಚಾರವಾಗಿ ಟ್ವೀಟ್‌ ಮಾಡಿರುವ ಅವರು, ‘ಕರ್ನಾಟಕದ ಯಾರೊಬ್ಬರೂ ಹಸಿದು ಮಲಗಬಾರದು ಎಂಬ ಸದಾಶಯದೊಂದಿಗೆ ಬಡಕುಟುಂಬಗಳಿಗೆ ತಲಾ 5 ಕೆ.ಜಿ ಆಹಾರಧಾನ್ಯವನ್ನು ವಿತರಣೆ ಮಾಡುವ ಯೋಜನೆಯನ್ನು 10 ಜುಲೈ 2013 ರಂದು ಜಾರಿಗೊಳಿಸಿ, ನಾಡಿನ ಹಸಿದವರಿಗೆ ನೆಮ್ಮದಿಯ ಅನ್ನ ನೀಡಿದ್ದೆ’ ಎಂದು ಹೇಳಿದ್ದಾರೆ.

ನಮ್ಮ ಈ ಯೋಜನೆಯನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಹಲವು ಆರ್ಥಿಕ- ಸಾಮಾಜಿಕ ಸಂಸ್ಥೆಗಳು ಮತ್ತು ಸರ್ಕಾರಗಳು ಶ್ಲಾಘಿಸಿವೆ ಎಂದು ಹೇಳಲು ಹೆಮ್ಮೆಯೆನಿಸುತ್ತದೆ ಎಂದು ಸಿಎಂ ತಿಳಿಸಿದ್ದಾರೆ.

ನಾಡಿನ ಜನತೆ ವಿಶ್ವಾಸವಿರಿಸಿ ನೀಡಿದ್ದ ರಾಜಕೀಯ ಅಧಿಕಾರವನ್ನು ಕರ್ನಾಟಕವನ್ನು ಹಸಿವು ಮುಕ್ತಗೊಳಿಸಲು ಸದ್ಬಳಕೆ ಮಾಡಿಕೊಂಡ ಸಂತೃಪ್ತಿ ನನ್ನದು ಎಂದು ಅವರು ಹೇಳಿದ್ದಾರೆ.

ಹಸಿವಿನ ಬೇನೆ ನಾಡಿನ ಬಡಜನರನ್ನು ಬಾಧಿಸದಿರಲಿ ಎಂಬ ಸದುದ್ದೇಶದೊಂದಿಗೆ ನಾವು ಇಂದಿನಿಂದ ‘ಅನ್ನಭಾಗ್ಯ’ ಯೋಜನೆಯಡಿ ಬಡಕುಟುಂಬದ ಪ್ರತಿ ವ್ಯಕ್ತಿಗೆ ತಲಾ 5 ಕೆ.ಜಿ ಅಕ್ಕಿ ಹಾಗೂ ರೂ. 170 ನೀಡಲಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಹೆಚ್ಚುವರಿ 5 ಕೆ.ಜಿ ಅಕ್ಕಿಯ ಬದಲಿಗೆ ನೀಡುವ ಹಣವನ್ನು ಆಹಾರ ಪದಾರ್ಥಗಳ ಖರೀದಿಗೆ ಮಾತ್ರ ಬಳಕೆ ಮಾಡಬೇಕೆಂದು ನಾಡ ಬಾಂಧವರಲ್ಲಿ ಮನವಿ ಮಾಡುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ.

ಟಾಪ್ ನ್ಯೂಸ್