ಒಳಮೀಸಲಾತಿ ವಿರೋಧಿಸಿ ಪ್ರತಿಭಟನೆ ತಾರಕಕ್ಕೆ, ಯಡಿಯೂರಪ್ಪ ಮನೆಗೆ ಕಲ್ಲೆಸೆತ, ಪೊಲೀಸರಿಂದ ಲಾಠೀ ಚಾರ್ಜ್; 144 ಸೆಕ್ಸನ್ ಜಾರಿ

ಶಿವಮೊಗ್ಗ;ರಾಜ್ಯ ಬಿಜೆಪಿ ಸರ್ಕಾರದ ಒಳಮೀಸಲಾತಿ ನಿರ್ಧಾರವನ್ನು ಖಂಡಿಸಿ ರಾಜ್ಯಾದ್ಯಂತ ಹೋರಾಟ ತೀವ್ರವಾಗಿದೆ.

ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರ ಶಿಕಾರಿಪುರದ ‘ಮೈತ್ರಿ’ ನಿವಾಸದ ಮೇಲೆ ಕಲ್ಲು ತೂರಾಟ ಮಾಡಲಾಗಿದೆ.ಒಳ ಮೀಸಲಾತಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವುದನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ಪ್ರತಿಭಟನಾಕಾರರು ಬಿಎಸ್​ವೈ ನಿವಾಸ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.

ಒಳ ಮೀಸಲಾತಿ ಪ್ರಮಾಣ ಕಡಿಮೆ ಮಾಡಿರುವುದನ್ನು ಖಂಡಿಸಿ ಇಂದು ಶಿಕಾರಿಪುರದಲ್ಲಿ ಬಂಜಾರ, ಕೊರಚ, ಕೊರಮ, ಭೋವಿ ಸಮುದಾಯದವರು ತೀವ್ರ ಪ್ರತಿಭಟನೆ ನಡೆಸಿದರು.ರಾಜ್ಯ ಮತ್ತು ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಪಟ್ಟಣದಲ್ಲಿ ಬಿಜೆಪಿ, ಪ್ರಧಾನಿ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ ಸೇರಿ ಬಿಜೆಪಿ ನಾಯಕರ ಫ್ಲೆಕ್ಸ್ ಗಳು, ಬ್ಯಾನರ್ ಗಳನ್ನು ಹರಿದು ಹಾಕಿದರು. ಟೈರ್, ಸೀರೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ಮನೆಗೆ ಮುತ್ತಿಗೆ ಹಾಕಿದ್ದು ಮಾತ್ರವಲ್ಲ ಅವರ ನಿವಾಸದ ಬಿಜೆಪಿ ಗೃಹ ಕಚೇರಿಯ ಮೇಲಿದ್ದ ಬಿಜೆಪಿ ಬಾವುಟವನ್ನ ತೆರವುಗೊಳಿಸಿದ ಪ್ರತಿಭಟನಾಕಾರರು ಬಂಜಾರ, ಭೋವಿ ಹಾಗೂ ಕೊರಚ ಸಮುದಾಯದ ಬಾವುಟಗಳನ್ನು ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾತ್ರವಲ್ಲ ಬಿಎಸ್‌ವೈ ಮನೆಗೆ ಕಲ್ಲು ಹೊಡೆದು ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್ ಗಳನ್ನು ತಳ್ಳಿ ಮನೆಯೊಳಗೆ ನುಗ್ಗಲು ಯತ್ನಿಸಿದ ಕಾರಣ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

ಭಿಗುವಿನ ಪರಿಸ್ಥಿತಿ ನಿಯಂತ್ರಿಸಲು ಶಿಕಾರಿಪುರ ಪಟ್ಟಣದಾದ್ಯಂತ ಸೆಕ್ಷನ್ 144 ಜಾರಿಯಾಗಿದೆ. ಶಿಕಾರಿಪುರ ತಹಶೀಲ್ದಾರ್ ವಿಶ್ವನಾಥ್ ರಿಂದ ಆದೇಶದ ಹಿನ್ನೆಲೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

ಟಾಪ್ ನ್ಯೂಸ್