ಶರಿಯತ್ ಶಿಕ್ಷಣ ನೀಡುವ ವಸತಿ ಸಂಸ್ಥೆಯಲ್ಲಿ 17 ವರ್ಷದ ಬಾಲಕಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕುಟುಂಬ
ತಿರುವನಂತಪುರ;ಬಲರಾಮಪುರಂನಲ್ಲಿರುವ ಮುಸ್ಲಿಂ ಧಾರ್ಮಿಕ ಶಿಕ್ಷಣ(ಶರಿಯತ್ ಕಾಲೇಜು) ಒದಗಿಸುವ ವಸತಿ ಸಂಸ್ಥೆಯಲ್ಲಿ 17 ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.
ಅಲ್ ಅಮಾನ್ ಎಂಬ ಸಂಸ್ಥೆಯ ಸ್ನಾನಗೃಹದಲ್ಲಿ ಬಾಲಕಿ ಅಸ್ಮಿಯಾ ಶವ ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ. ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಬಾಲಕಿಯ ಕುಟುಂಬಸ್ಥರು ಬಲರಾಮಪುರಂ ಪೊಲೀಸರಿಗೆ ದೂರು ನೀಡಿದ್ದಾರೆ.
ಅಸ್ಮಿಯಾ ಬೀಮಪಲ್ಲಿಯ ರಹಮತ್ ಬೀವಿ ಅವರ ಪುತ್ರಿ. ಬಾಲಕಿಯ ಸಾವು ಅನುಮಾನಾಸ್ಪದವಾಗಿದ್ದು, ಆಕೆಗೆ ಸಂಸ್ಥೆಯಲ್ಲಿ ಕಿರುಕುಳ ನೀಡಲಾಯಿತು ಎಂದು ದೂರಿನಲ್ಲಿ ತಿಳಿಸಿರುವ ಬಗ್ಗೆ ವರದಿಯಾಗಿದೆ.
ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಸ್ಮಿಯಾ ತನ್ನ ತಾಯಿಗೆ ಫೋನ್‌ನಲ್ಲಿ ಕರೆ ಮಾಡಿ ಕೂಡಲೇ ಸಂಸ್ಥೆಗೆ ಬರುವಂತೆ ಕೇಳಿಕೊಂಡಿದ್ದಾಳೆ. ಆದರೆ ಅಧಿಕಾರಿಗಳು ಆಸ್ಮಿಯಾ ಅವರನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ ಎನ್ನಲಾಗಿದೆ. ಬಳಿಕ ಮಗಳು ಬಾತ್ ರೂಂನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ ಎಂದು ಮಾಹಿತಿ ನೀಡಿದರು.
ಬಲರಾಮಪುರಂ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಬಾಲರಾಮಪುರಂ ಪೊಲೀಸ್ ಠಾಣೆ ಠಾಣಾಧಿಕಾರಿ ವಿಜಯಕುಮಾರ್ ಈ ಕುರಿತು ಮಾತನಾಡಿದ್ದು,ಬಾಲಕಿಯ ತಾಯಿಯಿಂದ ದೂರು ಸ್ವೀಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಬಾಲಕಿಯ ಮೃತ ದೇಹವನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.ಈ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಈ ಮೊದಲು ಅಸ್ಮಿಯಾ ಸಂಸ್ಥೆಯಲ್ಲಿ ಕಿರುಕುಳ ನೀಡುವ ಬಗ್ಗೆ ಪೋಷಕರಿಗೆ ದೂರು ನೀಡಿದ್ದರು ಎಂದು ಹೇಳಲಾಗಿದೆ.ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.