ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಯುದ್ಧದ ಹಿನ್ನೆಲೆ ಸೌದಿ ಅರೇಬಿಯಾವು ಪ್ಯಾಲೆಸ್ತೀನಿ ಜನರ ಜೊತೆ ಅಚಲವಾಗಿ ನಿಲ್ಲಲಿದೆ ಎಂದು ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಹೇಳಿದ್ದಾರೆ.
ಹಮಾಸ್ ಇಸ್ರೇಲ್ ವಿರುದ್ಧ ನಡೆಸಿದ ರಾಕೆಟ್ ದಾಳಿ ಬಳಿಕ ನಿರ್ಮಾಣವಾದ ಪರಿಸ್ಥಿತಿಯ ಮತ್ತಷ್ಟು ಉಲ್ಭಣವನ್ನು ತಡೆಯಲು ಕಾರ್ಯಪ್ರವೃತ್ತರಾಗಿರುವುದಾಗಿ ಮೊಹಮ್ಮದ್ ಬಿನ್ ಸಲ್ಮಾನ್ ಪ್ಯಾಲೆಸ್ತೀನ್ ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ಅವರಿಗೆ ಹೇಳಿದ್ದಾರೆ.
ಮಂಗಳವಾರ ಮುಂಜಾನೆ ಸೌದಿ ಸರ್ಕಾರಿ ಮಾಧ್ಯಮಗಳ ಮೂಲಕ ಪ್ಯಾಲೆಸ್ತೀನಿ ಜನರ ಜೊತೆ ಅಚಲವಾಗಿ ನಿಲ್ಲುವ ಬಗ್ಗೆ ಘೋಷಣೆಯನ್ನು ಮಾಡಲಾಗಿದೆ.
ಪ್ಯಾಲೆಸ್ತೀನ್ ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ಅವರ ಜೊತೆ ಮಾತನಾಡಿದ ಮೊಹಮ್ಮದ್ ಬಿನ್ ಸಲ್ಮಾನ್, ಸೌದಿಅರೇಬಿಯಾವು ಪ್ಯಾಲೆಸ್ತೀನ್ ಜನರ ಕಾನೂನುಬದ್ಧ ಹಕ್ಕುಗಳಿಗಾಗಿ, ಅವರ ಭರವಸೆ ಮತ್ತು ಆಕಾಂಕ್ಷೆಗಳ ಈಡೇರಿಕೆಗೆ, ನ್ಯಾಯ ಮತ್ತು ಶಾಶ್ವತವಾದ ಶಾಂತಿಗಾಗಿ ಅವರ ಪರವಾಗಿ ಸೌದಿ ಅರೇಬಿಯಾ ನಿಲ್ಲಲಿದೆ ಎಂದು ಹೇಳಿದ್ದಾರೆ.
ಹಮಾಸ್ ನಡೆಸಿದ ನೆಲ, ವಾಯು ಮತ್ತು ಸಮುದ್ರ ದಾಳಿ ಮತ್ತು ಇಸ್ರೇಲ್ ನಡೆಸಿದ ಪ್ರತಿ ದಾಳಿಯಿಂದ ಎರಡೂ ಕಡೆಗಳಲ್ಲಿ ಸಾವುನೋವುಗಳು ಸಂಭವಿಸಿದೆ. ಇಸ್ರೇಲ್‌ನಲ್ಲಿ 800ಮಂದಿ ಮೃತಪಟ್ಟಿದ್ದಾರೆ ಮತ್ತು ಗಾಜಾದಲ್ಲಿ ಮೃತರ ಸಂಖ್ಯೆ 687ಕ್ಕೆ ಏರಿಕೆಯಾಗಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿದೆ.
ಉಲ್ಬಣಗೊಳ್ಳುತ್ತಿರುವ ಬಿಕ್ಕಟ್ಟಿನ ಮಧ್ಯೆ, ಸೌದಿ ಅರೇಬಿಯಾ ಇಸ್ರೇಲ್‌ನೊಂದಿಗೆ ಬೆಂಬಲಕ್ಕೆ ನಿಂತಿದೆ ಎಂಬ ಊಹಾಪೋಹ ಹೊರಹೊಮ್ಮಿತ್ತು. ಆದರೆ ಸೌದಿ ರಾಜಕುಮಾರ ಮೊಹಮ್ಮದ್ ಇತ್ತೀಚೆಗೆ ಫಾಕ್ಸ್ ನ್ಯೂಸ್‌ನೊಂದಿಗೆ ಮಾತನಾಡುತ್ತಾ, ಸೌದಿ ಅರೇಬಿಯಾಕ್ಕೆ ಪ್ಯಾಲೆಸ್ತೀನ್ ಸಮಸ್ಯೆಯ ಮಹತ್ವವನ್ನು ಒತ್ತಿಹೇಳಿದ್ದು, ಸೌದಿಗೆ ಪ್ಯಾಲೆಸ್ತೀನ್ ಬುಹುಮುಖ್ಯವಾದುದು ಎಂದು ಹೇಳಿದ್ದಾರೆ. ನಾವು ಅವರ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ. ನಾವು ಪ್ಯಾಲೇಸ್ತೀನಿ ಜನರ ಜೀವನವನ್ನು ಸುಗಮಗೊಳಿಸಬೇಕಿದೆ ಎಂದು ಹೇಳಿದ್ದಾರೆ.
ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಇತರ ಪ್ರಾದೇಶಿಕ ನಾಯಕರೊಂದಿಗೆ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಿದ್ದಾರೆ. ಅವರು ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್-ಸಿಸಿ ಮತ್ತು ಜೋರ್ಡಾನ್ ರಾಜ ಅಬ್ದುಲ್ಲಾ II ಅವರೊಂದಿಗೆ ದೂರವಾಣಿ ಮೂಲಕ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ್ದಾರೆ ಎಂದು SPA ವರದಿ ಮಾಡಿದೆ.