ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗಲಿ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಪೋಟ; ತಾಯಿ & 10 ವರ್ಷದೊಳಗಿನ ಐವರು ಮಕ್ಕಳು ಸಜೀವ ದಹನ
ಉತ್ತರಪ್ರದೇಶ:ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ಮನೆಯಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅನಾಹುತಕ್ಕೆ 38 ವರ್ಷದ ಮಹಿಳೆ ಮತ್ತು ಅವರ ಒಂದು ವರ್ಷದಿಂದ 10 ವರ್ಷ ವಯಸ್ಸಿನ ಐವರು ಪುಟ್ಟ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಉರ್ಧಾ ಗ್ರಾಮದಲ್ಲಿ ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಗೀತಾ ಮತ್ತು ಅವರ ಐವರು ಮಕ್ಕಳು ಮಲಗಿದ್ದಾಗ ಬೆಂಕಿ ಕಾಣಿಸಿಕೊಂಡು ಮನೆಯೊಳಗೆ ಸಿಲುಕಿಕೊಂಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಅಗ್ನಿಶಾಮಕ ದಳದ ತಂಡವು ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ ಸಾವನ್ನಪ್ಪಿದ್ದ ಆರು ಜನರ ಮೃತದೇಹಗಳನ್ನು ಹೊರತೆಗೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಕಿಗೆ ಸುಟ್ಟು ಕರಕಲಾದವರನ್ನು ಸಂಗೀತಾ ಮತ್ತು ಅವರ ಮಕ್ಕಳಾದ ಬಾಬು (1), ಗೀತಾ (2), ರೀಟಾ (3), ಲಕ್ಷ್ಮೀನಾ (9) ಮತ್ತು ಅಂಕಿತ್ (10) ಎಂದು ಗುರುತಿಸಲಾಗಿದೆ.
ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಸೆಕೆಂಡುಗಳಲ್ಲಿ ಮನೆಯಲ್ಲಿ ಇರಿಸಲಾಗಿದ್ದ ಎಲ್‌ಪಿಜಿ ಸಿಲಿಂಡರ್‌ಗೆ ಬೆಂಕಿ ತಗುಲಿ ಅದು ಸ್ಫೋಟಗೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ವೇಳೆ ಸಂಗೀತಾ ಅವರ ಪತಿ ಮತ್ತು ಆತನ ತಂದೆ ಮತ್ತು ತಾಯಿ ಹೊರಗೆ ಮಲಗಿದ್ದು, ಪತ್ನಿ ತನ್ನ ಐವರು ಮಕ್ಕಳೊಂದಿಗೆ ಮನೆಯೊಳಗೆ ಮಲಗಿದ್ದರು.
ಮೊದಲು ಟಿನ್ ಶೆಡ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಮನೆಗೆ ವ್ಯಾಪಿಸಿದೆ.ಇದರಿಂದಾಗಿ ಪತಿಗೆ ತನ್ನ ಕುಟುಂಬವನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.