ಪುತ್ತೂರು;ಬಿಜೆಪಿ ಟಿಕೆಟ್ ಹಂಚಿಕೆಯ ವೇಳೆ ಸ್ಪೋಟಗೊಂಡಿದ್ದ ಬಿಜೆಪಿಯೊಳಗಿನ ಅಸಮಾಧಾನ ಚುನಾವಣೆ ಕಳೆದರೂ ನಿಲ್ಲುವಂತೆ ಕಂಡು ಬರುತ್ತಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸರ್ಕಾರಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಬಿಜೆಪಿ ನಾಯಕರ ಫೋಟೋಗಳನ್ನು ಹಾಕಿ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆದು
ಚಪ್ಪಲಿ ಹಾರ ಹಾಕಿರುವ ಬ್ಯಾನರ್ ಆಳವಡಿಸಲಾಗಿದೆ.
ಬಿಜೆಪಿ ನಾಯಕರಾಗಿರುವ ಮಾಜಿ ಸಿಎಂ ಸದಾನಂದ ಗೌಡ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರ ಭಾವಚಿತ್ರ ಬ್ಯಾನರ್ ನಲ್ಲಿ ಇದೆ.
ಬ್ಯಾನರ್ ನಲ್ಲಿ ‘ಭಾವಪೂರ್ಣ ಶ್ರದ್ಧಾಂಜಲಿ ಬಿಜೆಪಿ ಹೀನಾಯವಾಗಿ ಸೋಲಲು ಕಾರಣಕರ್ತರಾದ ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ. ನೊಂದ ಹಿಂದೂ ಕಾರ್ಯಕರ್ತರು’ ಎಂದು ಬರೆಯಲಾಗಿದೆ.ಅಷ್ಟೇ ಅಲ್ಲದೇ ಈ ಬ್ಯಾನರ್ ಗೆ ಚಪ್ಪಲಿ ಹಾರವನ್ನು ಹಾಕಲಾಗಿದೆ.
ಈ ಬ್ಯಾನರ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.ಬಿಜೆಪಿ ಟಿಕೆಟ್ ಹಂಚಿಕೆ ವೇಳೆ ಆದ ಎಡವಟ್ಟಿನಿಂದ ಇವತ್ತು ಪುತ್ತೂರಿನಲ್ಲಿ ಕಾಂಗ್ರೆಸ್ ಬರಲು ಕಾರಣ ಎನ್ನುವುದು ಬಿಜೆಪಿ ಕಾರ್ಯಕರ್ತರ ನಡುವಿನ ಮಾತುಗಳು.ಆಶಾ ತಿಮ್ಮಪ್ಪಗೆ ಬಿಜೆಪಿ ಟಿಕೆಟ್ ನೀಡಲಾಗಿತ್ತು.ಇದಕ್ಕೆ ಬಂಡಾಯವೆದ್ದು ಅರುಣ್ ಕುಮಾರ್ ಪುತ್ತಿಲ ಪಕ್ಷೇತರರಾಗಿ ಸ್ಪರ್ಧಿಸಿದ್ದರು.
ಕಾಂಗ್ರೆಸ್ ನ ಅಶೋಕ್ ಕುಮಾರ್ ರೈಗೆ ಪುತ್ತಿಲ ಭಾರೀ ಪೈಪೋಟಿಯನ್ನೇ ನೀಡಿದ್ದರು.ಕಾಂಗ್ರೆಸ್ ಕೇವಲ 4000 ಮತಗಳ ಅಂತರದಿಂದ ಗೆಲುವು ಸಾಧಿಸಿದೆ.
ಕಾಂಗ್ರೆಸ್ ಗೆಲುವಿನ ಬಳಿಕ ಬಿಜೆಪಿ ಕಾರ್ಯಕರ್ತರು ಟಿಕೆಟ್ ಹಂಚಿಕೆಯ ಎಡವಟ್ಟಿನಿಂದ ಹಿಂದುತ್ವದ ಭದ್ರಕೋಟೆಯನ್ನು ಕಳೆದುಕೊಂಡೆವು ಎಂದು ಹೇಳುತ್ತಿದ್ದಾರೆ.