ನೋಯ್ಡ: ಗ್ರೇಟರ್ ನೋಯ್ಡಾದಿಂದ ವರದಿಯಾಗಿರುವ ಆಘಾತಕಾರಿ ಘಟನೆಯೊಂದರಲ್ಲಿ 8 ನೇ ತರಗತಿಯ ವಿದ್ಯಾರ್ಥಿಯು ಶಾಲೆಯಿಂದ ಮನೆಗೆ ಹೋಗುವಾಗ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಗೌತಂಬುದ್ ಜಿಲ್ಲೆಯಲ್ಲಿ ನಡೆದಿದೆ.
15 ವರ್ಷದ ರೋಹಿತ್ ಸಿಂಗ್ ಪ್ರಜ್ಞೆ ತಪ್ಪಿ ಬಿದ್ದಾಗ ಶಿಕ್ಷಕರು ಆತನಿಗೆ ಸಹಾಯ ಮಾಡಲು ಪ್ರಯತ್ನಿಸಿದರು. ಶಿಕ್ಷಕರು ಬಾಲಕನಿಗೆ ಆಸ್ಪತ್ರೆಗೆ ಕರೆದೊಯ್ದ ನಂತರ ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.
ರೋಹಿತ್ ಗ್ರೇಟರ್ ನೋಯ್ಡಾದ ಜಲ್ಪುರ ಗ್ರಾಮದ ನಿವಾಸಿ. ಈತ ಜಲಪುರದ ಕಿರಿಯ ಸರಕಾರಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ.
ರೋಹಿತ್ ಕುಸಿದು ಬಿದ್ದಾಗ ಕೈಕಾಲುಗಳನ್ನು ಒತ್ತಿ ಸ್ವಲ್ಪ ಸಮಯ ನೀರು ಕೊಡಲು ಪ್ರಯತ್ನಿಸಿದೆವು. ಆದರೆ ಬಹಳ ಹೊತ್ತಾದರೂ ಪ್ರಜ್ಞೆ ಬರಲಿಲ್ಲ ಎಂದು ಶಾಲೆಯ ಶಿಕ್ಷಕರು ಹೇಳಿದ್ದಾರೆ. ಅಲ್ಲದೆ ನಿರ್ಜಲೀಕರಣಗೊಂಡಿರಬಹುದು ಎಂದು ಭಾವಿಸಿ ವಿದ್ಯಾರ್ಥಿಗೆ ಒಆರ್‌ಎಸ್ ದ್ರಾವಣವನ್ನು ನೀಡಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ ಎಂದು ಶಾಲೆಯ ಮುಖ್ಯೋಪಾಧ್ಯಾಯಿನಿ ನೂತನ್ ಸಕ್ಸೇನಾ ಹೇಳಿದ್ದಾರೆ.
ಬಳಿಕ ಆತನ ಮನೆಯವರಿಗೆ ಮಾಹಿತಿ ನೀಡಲಾಯಿತು. ಹಾಗೂ ಆಸ್ಪತ್ರೆಗೆ ಸೇರಿಸಲಾಯ್ತು ಎಂದೂ ಹೇಳಿದ್ದಾರೆ.
ವಿದ್ಯಾರ್ಥಿಯನ್ನು ಗ್ರೇಟರ್ ನೋಯ್ಡಾ ಪಶ್ಚಿಮದಲ್ಲಿರುವ ಯಥಾರ್ಥ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಸುನಿಲ್ ಬಲ್ಯಾನ್ ಮಾತನಾಡಿ, ಮಗು ಬರುವಾಗಲೇ ಮೃತಪಟ್ಟಿದೆ ಎಂದು ಹೇಳಿದ್ದಾರೆ. ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಹೇಳಿದ್ದಾರೆ.
ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಇಕೋಟೆಕ್-3 ಪೊಲೀಸ್ ಠಾಣೆಯ ಠಾಣಾಧಿಕಾರಿ ಸುನೀಲ್ ದತ್ ತಿಳಿಸಿದ್ದಾರೆ. ರೋಹಿತ್ ಮೃತದೇಹವನ್ನು ರಾತ್ರಿ ಕುಟುಂಬದವರಿಗೆ ಹಿಂತಿರುಗಿಸಲಾಯಿತು. ಪೊಲೀಸರು ಇನ್ನೂ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.