ಬೆಂಗಳೂರು;ಬಿಜೆಪಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಕ್ಕೆ ಸಿಕ್ಕಿದ ನೊಟೀಸ್ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ರೇಣುಕಾಚಾರ್ಯ, ನನಗೆ ನೀಡಿರುವ ನೋಟಿಸ್‍ಗೆ ಹೆದರಿ ಬಿಡುತ್ತೇನೆಂದು ಭಾವಿಸಿದ್ದರೆ ತಪ್ಪು. ಇಂತಹ ನೋಟಿಸ್‍ಗೆಲ್ಲ ನಾನು ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಬಿಎಸ್‍ವೈ ಅವರನ್ನು ಷಡ್ಯಂತ್ರ ಮಾಡಿ ಎರಡು ಬಾರಿ ಅಧಿಕಾರದಿಂದ ಇಳಿಸಿದರು. ಅವರ ಪಾದಯಾತ್ರೆ ಪ್ರತಿಫಲವಾಗಿ ಬಿಜೆಪಿ ಈ ಮಟ್ಟಕ್ಕೆ ಬೆಳೆದಿದೆ. ಅವರು ಬಿಜೆಪಿಯ ಅಗ್ರಮಾನ್ಯ ನಾಯಕ ಎಂದು ಹೇಳಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಶಾಸಕರು ಯಡಿಯೂರಪ್ಪ, ಮೋದಿ ಅವರನ್ನು ನೋಡಿ ಪಕ್ಷಕ್ಕೆ ಬಂದರು. ಅವರನ್ನು ಉಪ ಚುನಾವಣೆಗಳಲ್ಲಿ ಗೆಲ್ಲಿಸಿದರು. ಅಂತಹ ನಾಯಕರ ವಿರುದ್ಧ ಮಾತಾಡಿದರೆ ಪಕ್ಷ ಅವರಿಗೆ ನೋಟಿಸ್ ನೀಡಿಲ್ಲ. ಅವರಿಗೆ ರಾಜ ಮಾರ್ಯಾದೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆಯುತ್ತೇವೆ. ಜೆ.ಪಿ.ನಡ್ಡಾರನ್ನು ಭೇಟಿ ಮಾಡುತ್ತೇವೆ. ಬಿಜೆಪಿಯ ಹೀನಾಯ ಸೋಲಿಗೆ ಕಾರಣ ಏನು ಎಂದು ಹೇಳುತ್ತೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತೇನೆಂದು ಎಲ್ಲಿ ಸೃಷ್ಟಿ ಮಾಡಿದರೂ ಗೊತ್ತಿಲ್ಲ. ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ನನ್ನನ್ನು ಬಲಿಪಶು ಮಾಡಲು ಸಾಧ್ಯವಿಲ್ಲ.ನನ್ನನ್ನು ಟಾರ್ಗೆಟ್ ಮಾಡಲು ಆಗುವುದಿಲ್ಲ. ನನ್ನ ಮೇಲೆ ಮೋದಿ, ಬಿಎಸ್‍ವೈ ಮತ್ತು ಕ್ಷೇತ್ರದ ಜನರ ಆಶೀರ್ವಾದ ಇದೆ ಎಂದು ಹೇಳಿದ್ದಾರೆ.