ನವದೆಹಲಿ;ರಾಹುಲ್ ಗಾಂಧಿಗೆ ಸೂರತ್ ನ್ಯಾಯಾಲಯ ಮೋದಿ ಉಪನಾಮ ಮಾನನಷ್ಟಕ್ಕೆ ಸಂಬಂಧಿಸಿ ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೇ ಇದೀಗ ಮೋದಿ ವಿರುದ್ಧ ಕಾಂಗ್ರೆಸ್ ನಾಯಕಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕಿ, ಮಾಜಿ ಸಚಿವೆ ರೇಣುಕಾ ಚೌಧರಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಮೋದಿ ನನ್ನನ್ನು ಶೂರ್ಪನಖಿ ಎಂದು ಉಲ್ಲೇಖಿಸಿದ್ದಾರೆ. ಹೀಗಾಗಿ ನಾನು ಮೋದಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ನ್ಯಾಯಾಲಯಗಳು ಎಷ್ಟು ವೇಗವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೋಡೋಣ ಎಂದು ರೇಣುಕಾ ಚೌಧರಿ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕೆಲವರು ಈ ಹೇಳಿಕೆ ವಿರುದ್ಧ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಲು ಬರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೊದಲನೆಯದಾಗಿ ಮೋದಿ ಎಲ್ಲಿಯೂ ನೇರವಾಗಿ ರೇಣುಕಾ ಚೌಧರಿ ಅವರನ್ನು ʼಶೂರ್ಪನಖಿʼ ಎಂದು ಸಂಬೋಧನೆ ಮಾಡಿಲ್ಲ. ಎರಡನೇಯದಾಗಿ ಮೋದಿ ರಾಜ್ಯಸಭಾ ಕಲಾಪದಲ್ಲಿ ಮಾತನಾಡಿದ್ದಾರೆ. ಸಂಸತ್ತು ಅಥವಾ ರಾಜ್ಯದ ಶಾಸನ ಸಭೆಯಲ್ಲಿ ಸದಸ್ಯರ ವಿರುದ್ಧ ಏನೇ ಮಾತನಾಡಿದರೂ ಆ ಹೇಳಿಕೆಯನ್ನು ಪ್ರಶ್ನಿಸಿ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಸದನದಲ್ಲಿ ಮಾತನಾಡಿ ಹಕ್ಕು ಚ್ಯುತಿಯಾಗಿದ್ದರೆ ಅದನ್ನು ಸದನದಲ್ಲೇ ಪ್ರಶ್ನೆ ಮಾಡಬೇಕು. ಈ ವಿಚಾರದಲ್ಲಿ ಅಂತಿಮ ನಿರ್ಧಾರ ಸ್ಪೀಕರ್ ತೆಗೆದುಕೊಳ್ಳಬಹುದೇ ನ್ಯಾಯಾಧೀಶರ ವ್ಯಾಪ್ತಿಗೆ ಅದು ಬರುವುದಿಲ್ಲ ಎನ್ನಲಾಗಿದೆ.