ಕೊಣಾಜೆ:ಬಾವಿ ಕೊರೆಯಲು ಬಳಸಿದ ಸ್ಫೋಟಕದಿಂದ ಗರ್ಭಿಣಿ ಮಹಿಳೆ ಆಘಾತಕ್ಕೊಳಗಾಗಿದ್ದು, ಈ ಬಗ್ಗೆ ದೂರು ದಾಖಲಾಗಿರುವ ಬಗ್ಗೆ ವರದಿಯಾಗಿದೆ.
ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಡಕಬೈಲು ಎಂಬಲ್ಲಿ ಘಟನೆ ಸಂಭವಿಸಿದೆ.ಬಡಕಬೈಲು ನಿವಾಸಿ ಹರೀಶ್ ಎಂಬವರ ಪತ್ನಿ ಸಾವಿತ್ರಿ ಶಬ್ದದಿಂದ ಆಘಾತಕ್ಕೆ ಒಳಗಾದವರು ಎನ್ನಲಾಗಿದೆ.
ಇವರ ಮನೆಯ 100ಮೀ ಅಂತರದಲ್ಲಿ ಫಾರುಕ್ ಎಂಬವರು ಕಳೆದ ಎರಡು ವಾರದಿಂದ ಬಾವಿ ತೋಡುವ ಕೆಲಸ ಮಾಡುತ್ತಿದ್ದರು.ಬಾವಿ ತೋಡುವ ಮಧ್ಯೆ ಸಿಗುವ ಬಂಡೆಕಲ್ಲುಗಳನ್ನು ಒಡೆಯಲು ಸ್ಫೋಟಕ ಬಳಸಿದ್ದಾರೆ.
ಈ ವೇಳೆ ಪಕ್ಕದ ಮನೆಯಲ್ಲಿದ್ದ ಸಾವಿತ್ರಿ ಅವರು ದೊಡ್ಡ ಸದ್ದಿನಿಂದ ಆಘಾತಕ್ಕೆ ಒಳಗಾಗಿ ಪ್ರಜ್ಞೆ ತಪ್ಪಿ ನೆಲಕ್ಕುರುಳಿದ್ದಾರೆ.ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಒಳರೋಗಿಯಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಬಾವಿಯ ಮಾಲಕನ ವಿರುದ್ದ ಕೇಸ್ ದಾಖಲಾಗಿದೆ ಎಂದು ವರದಿಯಾಗಿದೆ.