ಬೆಂಗಳೂರು; ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರ ಕಡೆಗಣನೆ ಮಾಡಲಾಗುತ್ತದೆ ಹೇಳಿಕೆ ನೀಡಿದ್ದ ಹಿರಿಯ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಸಿದ್ದರಾಮಯ್ಯ ಆಪ್ತ, ಎಂಎಲ್‌ಸಿ ಪ್ರಕಾಶ್ ರಾಥೋಡ್ ಪ್ರತಿಕ್ರಿಯೆ ನೀಡಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ನನಗೆ ಅತೀವ ನೋವು ತಂದಿದೆ. ಪ್ರಮುಖ ಹುದ್ದೆಗಳಿಗೆ ಲಿಂಗಾಯತ ಸಮುದಾಯದ ಸದಸ್ಯರನ್ನು ಪರಿಗಣಿಸುತ್ತಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಅವರ ಸಾರ್ವಜನಿಕ ಹೇಳಿಕೆಯು ನನಗೆ ತೀರಾ ನಿರಾಶೆ ಉಂಟು ಮಾಡಿದೆ ಎಂದು ಹೇಳಿದ್ದಾರೆ.
ಈ ರೀತಿ ಹೇಳಿಕೆ ನಿಮಗೆ ದೊಡ್ಡ ಸಂಖ್ಯೆಯಲ್ಲಿ ಮತ ನೀಡಿದ ಸಮುದಾಯವನ್ನು ಮರೆತಿದ್ದೀರಿ. ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವಲ್ಲಿ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗದವರ ಕೊಡುಗೆಯನ್ನು ಮರೆತಿದ್ದೀರಿ ತಮ್ಮ ಸಮುದಾಯದವರ ಬಗ್ಗೆ ಮಾತನಾಡುವ ಮೂಲಕ ಉಳಿದೆಲ್ಲ ಸಮುದಾಯವರಿಗೆ ನೋವುಂಟು ಮಾಡಿದ್ದೀರಿ ಎಂದು ಪ್ರಕಾಶ್ ರಾಥೋಡ್ ಬರೆದಿದ್ದಾರೆ.
ನೀವು ಕೇವಲ ಒಂದು ಸಮುದಾಯದ ಮತಗಳಿಂದ 7 ಬಾರಿ ಆಯ್ಕೆಯಾದವರಲ್ಲ. ಕೇವಲ ಒಂದು ಸಮುದಾಯದ ಬೆರಳೆಣಿಕೆಯಷ್ಟು ಅಧಿಕಾರಿಗಳ ಪರವಾಗಿ ನೀವು ಧ್ವನಿ ಎತ್ತಿರುವ ವಿಷಯ ನನಗೆ ಬೇಸರ ತಂದಿದೆ. ಸಮೀಕ್ಷೆ ಪ್ರಕಾರ 80% ರಷ್ಟು ಮುಸ್ಲಿಮರು ಕಾಂಗ್ರೆಸ್ ಗೆ ಮತ ಹಾಕಿದ್ದಾರೆ. ಆದರೆ, ಲಿಂಗಾಯತರ ಕಡೆಯಿಂದ ಕಾಂಗ್ರೆಸ್‌ಗೆ ಬಂದಿರುವ ಮತಗಳು ಕೇವಲ 20% ಮಾತ್ರ. ಇಷ್ಟಿದ್ದರೂ ರಾಜ್ಯ ಸಂಪುಟದಲ್ಲಿ ಲಿಂಗಾಯತರಿಗೆ 7 ಸ್ಥಾನಗಳನ್ನು ನೀಡಲಾಗಿದೆ. ಮುಸ್ಲಿಂ ಸಮುದಾಯವರಿಗೆ ಕೇವಲ 2 ಸ್ಥಾನಗಳನ್ನು ಮಾತ್ರ ನೀಡಲಾಗಿದೆ ಎಂದು ಹೇಳಿದ್ದಾರೆ.
ಲಂಬಾಣಿ ಸಮುದಾಯವು ಶೇ.80ರಷ್ಟು ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದೆ.ಹಲವಾರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ಪ್ರಮುಖ ಪಾತ್ರ ವಹಿಸಿದೆ. ಆದರೂ ಲಂಬಾಣಿ ಸಮುದಾಯದವರಿಗೆ ಮಂತ್ರಿಸ್ಥಾನ ಸಿಕ್ಕಿಲ್ಲ. ಉಪ್ಪಾರ, ಬಣಜಿಗ ಹಾಗೂ ಯಾದವ ಸಮುದಾಯಕ್ಕೂ ಸಹ ಮಂತ್ರಿಸ್ಥಾನ ನೀಡಿಲ್ಲ ಎಂದು ಹೇಳಿದ್ದಾರೆ.