ರಾಮನವಮಿ ಮೆರವಣಿಗೆ ವೇಳೆ ಶಾಹಿ‌ ಮಸೀದಿ ಬಳಿ ಘರ್ಷಣೆ, ಕಲ್ಲು ತೂರಾಟ

ರಾಮನವಮಿಯ ಶೋಭಾ ಯಾತ್ರೆಯ ವೇಳೆ ಉತ್ತರ ಪ್ರದೇಶದ ಲಕ್ನೋದ ಹಳ್ಳಿಯೊಂದರ ಶಾಹಿ ಮಸೀದಿ ಬಳಿ ಗುರುವಾರ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ.

ಮೂಲಗಳ ಪ್ರಕಾರ, ಕಲ್ಲು ತೂರಾಟ ಮತ್ತು ದೈಹಿಕ ಹಲ್ಲೆ ನಡೆದಿದೆ. ಜಾಂಕಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಮಡಿಯಾವ್ ಗ್ರಾಮದಲ್ಲಿ ಮಧ್ಯಾಹ್ನ 1.30ಕ್ಕೆ ಈ ಘಟನೆ ನಡೆದಿದೆ.

ವ್ಯಕ್ತಿಯೊಬ್ಬರು ಇತರ 10-15 ಜನರೊಂದಿಗೆ ಡಿಜೆಯಲ್ಲಿ ಮ್ಯೂಸಿಕ್ ನುಡಿಸಿದಾಗ ಎರಡು ಗುಂಪುಗಳ ನಡುವೆ ವಾಗ್ವಾದ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನು ಮತ್ತೊಂದು ಗುಂಪು ಆಕ್ಷೇಪಿಸಿದ್ದು ಘರ್ಷಣೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಸುಮಾರು 10 ನಿಮಿಷಗಳ ಕಾಲ ನಡೆದ ವಿವಾದದಲ್ಲಿ ಎರಡೂ ಕಡೆಯವರು ಕಲ್ಲು ತೂರಾಟ, ದೈಹಿಕ ಹಲ್ಲೆ ಮತ್ತು ಆಸ್ತಿ ನಾಶದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ. ಗೊಂದಲದ ನಡುವೆ, ಡಿಜೆ ಕಾರ್ಟ್‌ಗೆ ಹಾನಿಯಾಗಿದೆ. ಮಾಹಿತಿ ತಿಳಿದ ಜಾಂಕಿಪುರಂ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಕಮಿಷನರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ

ಘಟನೆಯ ಬಳಿಕ ಸ್ಥಳದಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮೆರವಣಿಗೆಯಲ್ಲಿ ಅಧಿಕ ಜನ ಸೇರಿದ್ದರಿಂದ ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಘರ್ಷಣೆಯಿಂದ ನೂಕುನುಗ್ಗಲು ನಡೆದಿದೆ ಎನ್ನಲಾಗುತ್ತಿದೆ. ಗುಂಪುಗಾರಿಕೆಯನ್ನು ನಿಷೇಧಿಸಲಾಗಿದೆ. ಹಲವರನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸಿದ್ದಾರೆ.

ಡಿಸಿಪಿ ಖಾಸಿಂ ಅಬಿದಿ ಮಾತನಾಡಿ, ಮೆರವಣಿಗೆಗೆ ಯಾವುದೇ ಅನುಮತಿಯನ್ನು ಪಡೆಯಲಾಗಿಲ್ಲ, ಹೀಗಾಗಿ ಎರಡೂ ಗುಂಪುಗಳಲ್ಲಿ ಕೆಲವರನ್ನು ಬಂಧಿಸಲಾಗಿದೆ. ಪ್ರದೇಶದಲ್ಲಿ ಯಾವುದೇ ಶಾಂತಿಗೆ ಭಂಗ ಉಂಟಾಗಿಲ್ಲ ಎಂದು ಹೇಳಿದರು.ಪ್ರಮುಖವಾಗಿ, ಪೊಲೀಸರು ಮಸೀದಿ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ತಮ್ಮ ಪರಿಗಣನೆಗೆ ತೆಗೆದುಕೊಂಡಿದ್ದಾರೆ ಮತ್ತು ಸಂಗ್ರಹಿಸಿದ ದೃಶ್ಯಗಳ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಟಾಪ್ ನ್ಯೂಸ್