ಕಾಂಗ್ರೆಸ್ ನಾಯಕ ಅಝೀಝ್ ಖುರೇಷಿ ಅವರು ಕಾಂಗ್ರೆಸ್ ವಿರುದ್ಧವೇ ಅಸಮಾಧಾನ ಹೊರಹಾಕಿದ್ದು, ಮುಸ್ಲಿಮರು ನಿಮ್ಮ ಆದೇಶಕ್ಕೆ ತಕ್ಕಂತೆ ಕುಣಿಯುವ ನಿಮ್ಮ ಗುಲಾಮರಲ್ಲ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ರಾಜ್ಯಪಾಲರಾಗಿ,ಮಧ್ಯ ಪ್ರದೇಶ ಸಚಿವರಾಗಿ ಹಾಗೂ ಸಂಸದರಾಗಿ ಈ ಮೊದಲು ಖುರೇಷಿ ಕೆಲಸ ಮಾಡಿದ್ದರು.
ಮಧ್ಯ ಪ್ರದೇಶದ ವಿದಿಶಾದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ಕಾಂಗ್ರೆಸ್ ಪಕ್ಷದ ಮುಸ್ಲಿಂ ಮುಖಂಡರ ಸಭೆಯಲ್ಲಿ ಮಾತನಾಡಿದ ಖುರೇಷಿ,ಕಾಂಗ್ರೆಸ್ ಸಹಿತ ಎಲ್ಲಾ ಪಕ್ಷಗಳು ಅರ್ಥಮಾಡಿಕೊಳ್ಳಬೇಕು.ಅವರ ಆಜ್ಞಾನುಸಾರ ಕಾರ್ಯನಿರ್ವಹಿಸಲು ಮುಸ್ಲಿಮರು ಅವರ ಗುಲಾಮರು ಅಥವಾ ಜೀತದಾಳುಗಳಲ್ಲ ಎಂದು ಹೇಳಿದ್ದಾರೆ.
ಮುಸ್ಲಿಮರಿಗೆ ಪೊಲೀಸ್, ರಕ್ಷಣಾ ಪಡೆಗಳು ಮತ್ತು ಬ್ಯಾಂಕ್‌ಗಳಲ್ಲಿ ಉದ್ಯೋಗವಿಲ್ಲದೆ ಇರುವಾಗ ಅವರೇಕೆ ನಿಮಗೆ ಮತ ನೀಡಬೇಕು ಎಂದು ಖುರೇಷಿ ಪ್ರಶ್ನಿಸಿದ್ದಾರೆ.
ಅವರ ಅಂಗಡಿಗಳು,ಮನೆಗಳು ಮತ್ತು ಆರಾಧನಾ ಕೇಂದ್ರಗಳನ್ನು ಸುಟ್ಟು ಹಾಕಲಾಗುತ್ತಿದೆ.ಅವರ ಮಕ್ಕಳು ಅನಾಥರಾಗುತ್ತಿದ್ದಾರೆ.ಅವರು ಒಂದು ಹಂತದ ತನಕ ಸಹಿಸಬಹುದು.ಅವರು ಹೇಡಿಗಳಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಕ ಅಭಿಪ್ರಾಯ, ಕಾಂಗ್ರೆಸ್ ಜಾತ್ಯತೀತತೆಯ ಮೇಲೆ ನಂಬಿಕೆಯಿರಿಸಿದೆ ಎಂದು ಹೇಳಿದೆ.