ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದ ಬಾಲಕನನ್ನು ಕಾಲಿನಿಂದ ಒದ್ದು ದರ್ಪ ಮೆರೆದ ಪೊಲೀಸ್ ಅಧಿಕಾರಿ
ಉತ್ತರಪ್ರದೇಶ:ರೈಲು ನಿಲ್ದಾಣವೊಂದರ ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದ ಬಾಲಕನನ್ನು ರೈಲ್ವೆ ಪೊಲೀಸ್ ಪೇದೆಯೊಬ್ಬ ಕಾಲಿನಿಂದ ಒದ್ದು ಎಬ್ಬಿಸಿದ ಅಮಾನವೀಯ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯ ನಡೆಗೆ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.
ಉತ್ತರಪ್ರದೇಶ ಬಲ್ಲಿಯಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಾಲಕನೋರ್ವ ರೈಲು ನಿಲ್ದಾಣದ ಫ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದು, ಈತನನ್ನು ಬೂಟುಗಾಲಿನಿಂದ ಒದ್ದು ರೈಲ್ವೆ ರಕ್ಷಣಾ ಪಡೆ ಪೊಲೀಸ್ ಪೇದೆ ಎಬ್ಬಿಸಿದ್ದಾನೆ. ವೈರಲ್ ಆಗಿರುವ ವೀಡಿಯೋದಲ್ಲಿ ಪೊಲೀಸ್ ಅಧಿಕಾರಿಯ ಕಾಲು ಮಲಗಿದ್ದ ಬಾಲಕನ ಹೆಗಲ ಮೇಲಿರುವುದನ್ನು ಕಾಣಬಹುದಾಗಿದೆ.
ವೀಡಿಯೋ ವೈರಲ್ ಆಗುತ್ತಿದ್ದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಕರುಣೆ ಇಲ್ಲದ ಪೊಲೀಸ್ ಪೇದೆಯ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಉತ್ತರಪ್ರದೇಶದ ಬಲಿಯಾದ ಬೆಲ್ತಾರ ರೋಡ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ವೀಡಿಯೋದಲ್ಲಿ ಬಾಲಕ ಪ್ಲಾಟ್‌ಫಾರ್ಮ್‌ನಲ್ಲೇ ನಿದ್ದೆಗೆ ಜಾರಿದ್ದಾನೆ.
ಘಟನೆ ಬೆನ್ನಲ್ಲೇ ರೈಲ್ವೆ ಇಲಾಖೆ ಆರೋಪಿಯನ್ನು ಸೇವೆಯಿಂದ ಅಮಾನತುಗೊಳಿಸಿದೆ ಎಂದು ವರದಿಯಾಗಿದೆ.