ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದ ಪ್ರತಿಭಟನಾಕಾರ ಮಹಾರಾಷ್ಟ್ರದ ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಮೇಲೆ ಅರಿಶಿನ ಎರಚಿದ ಘಟನೆ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣದ ಸಂಬಂಧ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಸೊಲ್ಲಾಪುರದಲ್ಲಿರುವ ಸರ್ಕಾರಿ ಗೆಸ್ಟ್ ಹೌಸ್ನಲ್ಲಿ ಮೀಸಲಾತಿಗೆ ಒತ್ತಾಯಿಸಿ ದಂಗರ್ (ಕುರುಬ) ಸಮುದಾಯದ ಪ್ರಮುಖರೊಂದಿಗೆ ಸಭೆ ನಡೆಸುತ್ತಿದ್ದರು.
ಈ ವೇಳೆ ಸಭೆಯಲ್ಲಿ ಹಾಜರಿದ್ದ ಸಮುದಾಯದ ಮುಖಂಡನೋರ್ವ ಏಕಾಏಕಿ ಸಚಿವರ ಮೇಲೆ ಅರಿಶಿನವನ್ನು ಎರಚಿ ಮೀಸಲಾತಿ ನೀಡುವಂತೆ ಘೋಷಣೆಗಳನ್ನು ಕೂಗಿದ್ದಾರೆ.
ಈ ವೇಳೆ ಅಲ್ಲಿದ್ದ ಸಚಿವರ ಬೆಂಲಿಗರು ಹಾಗೂ ಅವರ ಅಂಗರಕ್ಷಕರು ಕೂಡಲೇ ಆ ವ್ಯಕ್ತಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತನನ್ನು ಶೇಖರ್ ಬಂಗಲೆ ಎಂದು ಗುರುತಿಸಲಾಗಿದ್ದು, ತನ್ನ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಈ ರೀತಿ ಮಾಡಿದ್ದಾಗಿ ತಿಳಿಸಿದ್ದಾರೆ.